ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ತ್ರೈಮಾಸಿಕಗಳಲ್ಲಿ ವಲಯಗಳ ಆಧಾರಿತ ಕುಸಿತದ ಬಳಿಕ 'ಭಾರತದ ಬೆಳವಣಿಗೆಯ ದರವು ಶೇ. 6ಕ್ಕೆ ಇಳಿಯಲಿದೆ' ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.
2018-19ರಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ದರವು ಶೇ. 6.9 ರಷ್ಟಿತ್ತು. ಈ ವರ್ಷ ಅದು ಶೇ. 6ಕ್ಕೆ ಇಳಿದಿದೆ. 2017-18ರ ವಿತ್ತೀಯ ವರ್ಷದಲ್ಲಿ ಬೆಳವಣಿಗೆ ದರವು ಶೇ 7.2ರಷ್ಟು ಇತ್ತು. ಮರು ವರ್ಷವೇ ಅದು ಶೇ 6.8ಕ್ಕೆ ತಲುಪಿತ್ತು. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಜೊತೆಗೆ ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಮುಂಚಿತವಾಗಿ ಈ ವರದಿ ಬಿಡುಗಡೆ ಆಗಿದ್ದು, ಭಾರತದ ಆರ್ಥಿಕ ಬೆಳವಣಿಗೆ ಸತತ ಎರಡನೇ ವರ್ಷವೂ ಕುಸಿತ ಕಂಡಿದೆ.
ವಿಶ್ವ ಬ್ಯಾಂಕ್ ತನ್ನ ಇತ್ತೀಚಿನ ಆವೃತ್ತಿಯ ದಕ್ಷಿಣ ಏಷ್ಯಾ ಎಕನಾಮಿಕ್ ಫೋಕ್ಸನಲ್ಲಿ, ಭಾರತದ ಆರ್ಥಿಕ ಬೆಳವಣಿಗೆಯು 2021ರಲ್ಲಿ ಶೇ. 6.9ಕ್ಕೆ ಮತ್ತು 2022ರಲ್ಲಿ ಶೇ 7.2ಕ್ಕೆ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಭವಿಷ್ಯ ನುಡಿದಿದೆ. ಹಣಕಾಸು ನಿಲುವಿನ ಸೌಕರ್ಯಗಳ ಒದಗಿಸುವಿಕೆ, ನ್ಯಾಯೋಚಿತ ಬೆಲೆ ನಿರ್ಧಾರದಂತಹ ಅಗಾದ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯ ಹೊಂದಿದೆ ಎಂಬುದಾಗಿಯೂ ಅದು ಅಭಿಪ್ರಾಯಪಟ್ಟಿದೆ.
ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳ ಹೆಚ್ಚಳದಿಂದ ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಶೇ. 6.9ಕ್ಕೆ ಏರಿದರೆ ಕೃಷಿ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆ ಕ್ರಮವಾಗಿ ಶೇ. 2.9 ಮತ್ತು ಶೇ. 7.5ಕ್ಕೆ ತಲುಪಿದೆ. 2019-20ರ ಮೊದಲ ತ್ರೈಮಾಸಿಕದ ಆರ್ಥಿಕತೆಯು ಗಮನಾರ್ಹ ಮತ್ತು ವಲಯಗಳ ಆಧಾರಿತ ಬೆಳವಣಿಗೆ ದರ ಕುಸಿತ ಅನುಭವಿಸಿದೆ. ಬೇಡಿಕೆಯ ಜೊತೆಗೆ ಖಾಸಗಿ ಅನುಭೋಗದ ಬಳಕೆಯಲ್ಲಿ ತೀವ್ರ ಕುಸಿತ ಕಂಡಿದೆ. ಪೂರೈಕೆ ಮತ್ತು ಉದ್ಯಮ ಹಾಗೂ ಸೇವೆಗಳೆರಡರಲ್ಲೂ ಬೆಳವಣಿಗೆಯು ದುರ್ಬಲಗೊಂಡಿದೆ ಎಂದು ವರದಿ ತಿಳಿಸಿದೆ.