ನವದೆಹಲಿ : ಜೂನ್ ಅಂತ್ಯದ ವೇಳೆಗೆ ದೇಶದ ಆರ್ಥಿಕ ಬೆಳವಣಿಗೆ ಶೇ.23.9ರಷ್ಟು ಕುಸಿತ ಕಂಡಿರುವುದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಎಚ್ಚರಿಸಿದ್ದಾರೆ. ಅಧಿಕಾರಶಾಹಿಗಳು ಸಮಾಧಾನದಿಂದ ಹೊರ ಬಂದು ಅರ್ಥಪೂರ್ಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಚುರುಕಿನಿಂದ ಕೆಲಸ ಮಾಡಬೇಕಿದೆ. ಕಂಪನಿಗಳು ತಮ್ಮ ಎಲ್ಲಾ ರೀತಿಯ ಚಟುವಟಿಕೆ ಸ್ಥಗಿತಗೊಳಿಸಿರುವುದು ದುರದುಷ್ಟಕರ. ಇವೆಲ್ಲವನ್ನೂ ಮರಳಿ ಯಥಾಸ್ಥಿತಿಗೆ ತರಬೇಕಿದೆ. ಭಾರತದಲ್ಲಿ ಶೇ 23.9 ರಷ್ಟು ಆರ್ಥಿಕತೆ ಕುಸಿದಿದೆ. ಆದರೆ, ಕೊರೊನಾ ವೈರಸ್‌ನಿಂದಾಗಿ ಮುಂದುವರಿದಿರುವ ದೇಶ ಅಮೆರಿಕಾದಲ್ಲಿ ಶೇ 9.5 ರಷ್ಟು ಹಾಗೂ ಇಟಲಿಯಲ್ಲಿ ಶೇ 12.4 ಆರ್ಥಿಕ ಬೆಳವಣಿಗೆ ನಷ್ಟ ಕಂಡಿರುವುದನ್ನು ತಮ್ಮ ಲಿಂಕ್ಡ್ಇನ್ ಪೇಜ್‌ನಲ್ಲಿ ರಾಜನ್ ಬರೆದುಕೊಂಡಿದ್ದಾರೆ.
ಭಾರತವನ್ನು ಕೊರೊನಾ ವೈರಸ್ ಇನ್ನೂ ಕಾಡುತ್ತಿದೆ. ಪ್ರಮುಖ ಉದ್ಯಮಗಳಾದ ರೆಸ್ಟೋರೆಂಟ್ ಸೇರಿ ಹಲವು ವಲಯಗಳಿಗೆ ಹೊಡೆತ ಬಿದ್ದಿದೆ. ಇಂತಹ ಸಂಸ್ಥೆಗಳನ್ನು ಅವಲಂಬಿಸಿರುವ ಉದ್ಯೋಗಿಗಳು ವೈರಸ್ ನಿಯಂತ್ರಿಸುವವರೆಗೆ ಕನಿಷ್ಠ ಮಟ್ಟದಲ್ಲಿ ಜೀವನ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಆರ್ಥಿಕತೆ ರೋಗಿ ಅಂತಾ ಇಟ್ಟುಕೊಳ್ಳೋಣ. ಆತ ಗುಣಮುಖರಾಗಲು ಚಿಕಿತ್ಸೆಯಂಥ ಪರಿಹಾರದ ಅವಶ್ಯಕತೆ ಇದೆ. ರೋಗದ ವಿರುದ್ಧ ಹೋರಾಡಲು ಶಕ್ತಿ ಬೇಕಿದೆಯೆಂಬ ಉದಾಹರಣೆ ನೀಡಿದ್ದಾರೆ. ಪರಿಹಾರ ನೀಡದಿದ್ರೆ ಜನ ತಮ್ಮ ಊಟ ಕಡಿತ ಮಾಡಿಕೊಳ್ಳುತ್ತಾರೆ. ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದನ್ನು ನಿಲ್ಲಿಸುತ್ತಾರೆ. ಕೆಲಸಕ್ಕೆ ಅಥವಾ ಭಿಕ್ಷೆ ಬೇಡಲು ಮಕ್ಕಳನ್ನು ಕಳುಹಿಸುತ್ತಾರೆ. ಇಲ್ಲವೇ ತಮ್ಮಲ್ಲಿರುವ ಚಿನ್ನವನ್ನು ಅಡ ಇಡುತ್ತಾರೆ. ಇಎಂಐ, ಬಾಡಿಗೆ ಕಟ್ಟುವುದನ್ನು ನಿಲ್ಲಿಸುತ್ತಾರೆ. ಹೀಗಾಗಿ, ಒಬ್ಬ ವ್ಯಕ್ತಿ ತನಗೆ ತಾನೇ ಒಂದು ಕಂಪನಿಯಾಗಿದ್ದಾನೆ ಎಂದು ಅವರು ವಿವರಿಸಿದ್ದಾರೆ.
ಪ್ರಸ್ತುತ ರಘುರಾಂ ರಾಜನ್, ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಆರ್‌ಬಿಐನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.