ಮುಂಬೈ: ಮುಂದಿನ ಐದು ವರ್ಷಗಳಲ್ಲಿ ವಿತ್ತೀಯ ಕೊರತೆಯನ್ನು ತಗ್ಗಿಸುವ ಗುರಿಗೆ ಆರ್ಥಿಕ ನಡೆಗಳು ಅಡ್ಡಿಯಾಗಲಿವೆ ಎಂದು ಮೂಡಿಸ್ ವಿಶ್ಲೇಷಿಸಿದೆ.
2019-20ನೇ ಸಾಲಿನಲ್ಲಿ ಭಾರತ, ತನ್ನ ಹಣಕಾಸಿನ ಕೊರತೆಯ ಗುರಿಯನ್ನು ಸ್ವಲ್ಪ ತಗ್ಗಿಸಿರುವ ನಿರ್ಧಾರವು ಸರಿಯಾದ ದಿಕ್ಕಿನಲ್ಲಿದೆ. ಆದರೆ, ಅದನ್ನು ಸಾಧಿಸುವುದು ಸವಾಲಿನ ಸಂಗತಿಯಾಗಿದೆ ಎಂದು ಜಾಗತಿಕ ಆರ್ಥಿಕ ವಿಶ್ಲೇಷಕ ಸಂಸ್ಥೆ ಮೂಡಿಸ್ ಅಭಿಪ್ರಾಯಪಟ್ಟಿದೆ.
'ಫೆಬ್ರವರಿಯಲ್ಲಿ ನಿಗದಿಪಡಿಸಿದ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.4ರಿಂದ 2020ರ ಮಾರ್ಚ್ ವೇಳೆಗೆ ಶೇ 3.3ಕ್ಕೆ ಮತ್ತು 2021ರ ಮಾರ್ಚ್ ಅಂತ್ಯಕ್ಕೆ ಶೇ 3ರಷ್ಟು ಸಾಧಿಸುವುದಾಗಿ' ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಆರ್ಥಿಕತೆಯ ನಿಧಾನಗತಿಯ ಬೆಳವಣಿಗೆಯ ತೊಡಕುಗಳ ಪರಿಹಾರಕ್ಕೆ ಬಜೆಟ್‌ನಲ್ಲಿ ಅಲ್ಪ ಬೆಂಬಲ ನೀಡಲಾಗಿದೆ. ಕಠಿಣ ಹಣಕಾಸಿನ ಕೊರತೆ ಸಾಧಿಸುವುದು ಸವಾಲಾಗಿ ಪರಿಣಮಿಸಲಿದೆ ಎಂದು ಮೂಡಿಸ್ ತಜ್ಞರು ಎಚ್ಚರಿಸಿದ್ದಾರೆ.
ಕಡಿಮೆ ಗುರಿಯ ಹೊರತಾಗಿಯೂ ಕಡಿಮೆ ಆದಾಯ ಹೊಂದಿದ ಕೃಷಿ ಮತ್ತು ಕಾರ್ಮಿಕರ ಬೆಂಬಲಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೆಲವು ತೆರಿಗೆ ಕಡಿತಗಳನ್ನು ಘೋಷಿಸಿದ್ದಾರೆ. ಇದು ಕೂಡು ಒಂದು ಕಾರಣವಾಗಲಿದೆ ಎಂದು ಹೇಳಿದೆ.