ವಾಷಿಂಗ್ಟನ್: ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯಾಗಿದೆ. ಆರ್ಥಿಕತೆಯ ಬೆಳೆವಣಿಗೆಯ ದರದ ಜೊತೆಜೊತೆಯಲ್ಲಿ ದೇಶವನ್ನು ಕಾಡುತ್ತಿರುವ ಬಡತನ ಮತ್ತು ಇತರೆ ಸವಾಲುಗಳನ್ನು ಮೆಟ್ಟಿನಿಂತು ವಾರ್ಷಿಕ ಶೇ 8ರ ಪ್ರಮಾಣದ ಬೆಳವಣಿಗೆ ದರದ ಅಗತ್ಯತೆ ಭಾರತಕ್ಕೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಹಾಗೂ ವಿಶ್ವಬ್ಯಾಂಕ್ ನೇತೃತ್ವದಲ್ಲಿ ನಡೆಯುತ್ತಿರುವ ಋತುಮಾನ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳ ಹಿಂದಿನ ಶೇ 7.5ರಷ್ಟು ಬೆಳವಣಿಗೆಯ ನಿರೀಕ್ಷೆಯು ಉತ್ತಮವಾಗಿತ್ತು. ಭೂ ವ್ಯಾಜ್ಯ ಮತ್ತು ಕಾರ್ಮಿಕ ವಲಯಗಳಲ್ಲಿ ಹೆಚ್ಚು ರಚನಾತ್ಮಕ ಸುಧಾರಣೆಗಳನ್ನು ತರುವುದರಿಂದ ದೇಶದ ಆರ್ಥಿಕತೆಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ತೈಲ ದರ, ಹಣದುಬ್ಬರ ತಗ್ಗಿಸುವ ಉದ್ದೇಶಿತ ಗುರಿ ಹಾಗೂ ಮುಂಬರಲಿರುವ ಆರ್ಥಿಕ ಸವಾಲುಗಳನ್ನು ಎದುರಿಸಿ 2019-20ರ ಹಣಕಾಸು ವರ್ಷದಲ್ಲಿ ಭಾರತ ಶೇ 7.2ರ ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿದರು.
ದೀರ್ಘಕಾಲದವರೆಗೆ ತೈಲ ದರ ಏರುಗತಿಯಲ್ಲಿ ಸಾಗಿದರೆ, ಭಾರತದ ಬೆಳವಣಿಗೆ ಹಾಗೂ ಚಾಲ್ತಿ ಖಾತೆ ಕೊರತೆಯ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ. ಇದು ರೂಪಾಯಿ ಮೌಲ್ಯವನ್ನು ತಗ್ಗಿಸಬಹುದು. ಆರ್ಥಿಕ ಬಿಕ್ಕಟ್ಟುಗಳ ಮಧ್ಯೆ ಬಳಲುತ್ತಿರುವ ಬ್ಯಾಂಕಿಂಗ್ ವಲಯಕ್ಕೆ ಇಂಧನ ಬೆಲೆ ಏರಿಕೆ ಇನ್ನಷ್ಟು ಸವಾಲೊಡ್ಡಬಹುದು ಎಂದು ದಾಸ್ ಅಂದಾಜಿಸಿದ್ದಾರೆ.
ಪ್ರಮುಖವಾಗಿ ಆರ್ಥಿಕ ಬೆಳವಣಿಗೆಯ ಪುನಶ್ಚೇತನ, ಸೂಕ್ಷ್ಮ ಆರ್ಥಿಕತೆ ಹಾಗೂ ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ಇರಿಸಿಕೊಂಡಿದ್ದೇವೆ. ಈ ಬಗ್ಗೆ ಸಂಘಟಿತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ವಿಶ್ವ ಸಮುದಾಯದ ಮುಂದೆ ಭಾರತದ ಅರ್ಥವ್ಯವಸ್ಥೆಯ ಸಾಧನೆ, ಸವಾಲುಗಳನ್ನು ಪ್ರಸ್ತುಪಡಿಸಿದರು.