ನವದೆಹಲಿ : 2020-21ರ ಏಪ್ರಿಲ್-ಜುಲೈ ಅವಧಿಯಲ್ಲಿ ಭಾರತದ ಬಜೆಟ್ ವಿತ್ತೀಯ ಕೊರತೆಯು 8.21 ಲಕ್ಷ ಕೋಟಿ ರೂ. ದಾಟಿದ್ದು, ಬಜೆಟ್ ಅಂದಾಜಿನ (ಬಿಇ) ಶೇ.103.1ರಷ್ಟಾಗಿದೆ. ಲಾಕ್‌ಡೌನ್ ಹೇರಿಕೆಯಿಂದ ಆದಾಯ ಕೊರತೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಕೇಂದ್ರದ ಹಣಕಾಸಿನ ಕೊರತೆಯು ಪ್ರಚಲಿತ ವಿತ್ತೀಯ ವರ್ಷದ ಬಜೆಟ್ ಗುರಿಯ ನಾಲ್ಕು ತಿಂಗಳಲ್ಲಿ (ಏಪ್ರಿಲ್-ಜುಲೈ) ಮೀರುತ್ತಿದೆ.
ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಏಪ್ರಿಲ್-ಜುಲೈ ಅವಧಿಯಲ್ಲಿ ಹಣಕಾಸಿನ ಕೊರತೆಯು ವಾರ್ಷಿಕ ಗುರಿಯ ಶೇ.103.1 ಅಥವಾ 8,21,349 ಕೋಟಿಯಷ್ಟಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು ವಾರ್ಷಿಕ ಗುರಿಯ ಶೇ. 77.8ರಷ್ಟಿತ್ತು. ಖರ್ಚು ಮತ್ತು ಆದಾಯದ ನಡುವಿನ ವ್ಯತ್ಯಾಸ ಸೂಚಿಸುವ ಹಣಕಾಸಿನ ಕೊರತೆಯು ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಾರ್ಷಿಕ ಗುರಿ ದಾಟ್ಟಿತ್ತು.
ಫೆಬ್ರವರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟ್‌ನಲ್ಲಿ 2020-21ರ ಹಣಕಾಸಿನ ಕೊರತೆ 7.96 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ.3.5 ರಷ್ಟರಲ್ಲಿ ನಿಗದಿಪಡಿಸಿಕೊಂಡಿದ್ದರು. ಹಣಕಾಸಿನ ಕೊರತೆಯು 2019-20ರಲ್ಲಿ ಏಳು ವರ್ಷಗಳ ಗರಿಷ್ಠವಾಗಿ ಜಿಡಿಪಿಯ ಶೇ.4.6ಕ್ಕೆ ಏರಿತ್ತು. ಕಳಪೆಯಾದ ಆದಾಯ ಸಂಗ್ರಹ ಹಾಗೂ ಮಾರ್ಚ್ ಅಂತ್ಯದ ಲಾಕ್‌ಡೌನ್ ಕಾರಣದಿಂದ ಈ ವೇಳೆಗೆ ಮತ್ತಷ್ಟು ಕುಸಿದಿದೆ.
ಸಿಎಜಿ ಅಂಕಿಅಂಶಗಳ ಪ್ರಕಾರ, ಸರ್ಕಾರದ ಆದಾಯದ ಸ್ವೀಕೃತಿ 2,27,402 ಕೋಟಿ ರೂ. ಅಥವಾ ಬಜೆಟ್ ಅಂದಾಜಿನ (ಬಿಇ) ಶೇ 11.3ರಷ್ಟಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಸ್ವೀಕೃತಿಯ ಬಿಇ ಶೇ.19.5ರಷ್ಟಿತ್ತು. ತೆರಿಗೆ ಆದಾಯವು ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 2,02,788 ಕೋಟಿ ರೂ. ಅಥವಾ ಬಿಇ ಶೇ.12.4ರಷ್ಟಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ತೆರಿಗೆ ಆದಾಯವು ಬಿಇಯ ಶೇ. 20.5ರಷ್ಟಿತ್ತು.
ಸರ್ಕಾರದ ಒಟ್ಟು ಸ್ವೀಕೃತಿ ಬಿಇ ಶೇ.10.4ರಷ್ಟು ಅಥವಾ 2,32,860 ಕೋಟಿ ರೂ.ನಷ್ಟಿತ್ತು. ಬಜೆಟ್‌ನಲ್ಲಿ ಸರ್ಕಾರವು ಹಣಕಾಸಿನ ಒಟ್ಟು ಸ್ವೀಕೃತಿ 22.45 ಲಕ್ಷ ಕೋಟಿ ರೂ. ಇರಿಸಿತ್ತು. ಸರ್ಕಾರದ ಒಟ್ಟು ಖರ್ಚು ಜುಲೈ ಅಂತ್ಯದ ವೇಳೆಗೆ 10,54,209 ಕೋಟಿ ರೂ. ಅಥವಾ ಬಿಇಯ ಶೇ.34.7ರಷ್ಟಿತ್ತು. ಕಳೆದ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ ಒಟ್ಟು ಖರ್ಚು ಬಿಇಯ ಶೇ.34ರಷ್ಟಿತ್ತು.
ಹಣಕಾಸಿನ ಕೊರತೆ ಹೆಚ್ಚಾದರೆ, ಸರ್ಕಾರವು ಸಾಲ ಮಾಡಬೇಕಾಗುತ್ತದೆ ಅಥವಾ ಹೆಚ್ಚು ಹಣವನ್ನು ಮುದ್ರಿಸಬೇಕಾಗುತ್ತದೆ. ಹಣ ಟಂಕಿಸಲು ಆರ್‌ಬಿಐಗೆ ಕೋರಿಕೊಳ್ಳಬೇಕಾಗುತ್ತೆ. ಹಣ ಮುದ್ರಿಸುವುದರಿಂದ ಸಾಕಷ್ಟು ಅಡ್ಡ ಪರಿಣಾಮಗಳು ಆರ್ಥಿಕತೆಯ ಮೇಲೆ ಬೀರುತ್ತವೆ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಬಡ್ಡಿದರ ಏರಿಕೆಗೆ ಕಾರಣವಾಗುತ್ತದೆ.