ನವದೆಹಲಿ: ಹಿಂದೊಮ್ಮೆ 'ಯಾವುದೇ ಕ್ರಿಯಾ ಯೋಜನೆ ಇಲ್ಲದೇ ಭ್ರಷ್ಟಾಚಾರ ಕೊನೆಗೊಳಿಸಲು ಹೇಗೆ ನಿರ್ಧರಿಸಿದ್ದೀರಾ' ಎಂದು ಸುಪ್ರೀಂಕೋರ್ಟ್ ವಿಷಾದ ವ್ಯಕ್ತಪಡಿಸಿತ್ತು. ಯುಪಿಎ ಆಡಳಿತಾವಧಿಯಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿಸಿ ಜನ ಲೋಕಪಾಲ್ ಮಸೂದೆ ಜಾರಿಗೆ ತರುವಂತೆ ರಾಷ್ಟ್ರರಾಜಧಾನಿಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಹಲವು ವರ್ಷಗಳು ಉರುಳಿದ್ದರೂ ಭಾರತದಲ್ಲಿ ಭ್ರಷ್ಟಾಚಾರ ಪ್ರಮಾಣ ಇನ್ನೂ ತಗ್ಗಿಲ ಎಂಬುದು ಇತ್ತೀಚಿನ ವರದಿಯಿಂದ ತಿಳಿದು ಬಂದಿದೆ.
ಭ್ರಷ್ಟಾಚಾರದ ವಾಚ್‌ಡಾಗ್ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ ಹೊಸ ವರದಿಯ ಪ್ರಕಾರ, ಶೇ 39ರಷ್ಟು ಲಂಚದ ಪ್ರಮಾಣ ಹೊಂದಿರುವ ಭಾರತವು ಏಷ್ಯಾದಲ್ಲಿ ಕಡುಭ್ರಷ್ಟ ರಾಷ್ಟ್ರ ಎಂಬ ಕಪ್ಪು ಚುಕ್ಕೆಗೆ ಭಾರತ ಪಾತ್ರವಾಗಿದೆ. ಇದಲ್ಲದೇ ಸಾರ್ವಜನಿಕ ಸೇವೆಗಳನ್ನು ಪಡೆಯಲು ಕೆಲವರು ವೈಯಕ್ತಿಕ ಸಂಬಂಧ ಸಾಧಿಸಬೇಕು ಅಥವಾ ಲಂಚ ಪಾವತಿಸಬೇಕಾಗಿದೆ.
ಭಾರತದಲ್ಲಿ ಬಿಟ್ಕಾಯಿನ್ ಕೊಳ್ಳುವುದು & ಮಾರುವುದು ಹೇಗೆ?: ಇಲ್ಲಿದೆ ಸಂಪೂರ್ಣ ಮಾಹಿತಿ
17 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ನಂತರ ಕಾಂಬೋಡಿಯಾ (37 ಪ್ರತಿಶತ) ಮತ್ತು ಇಂಡೋನೇಷ್ಯಾ (30 ಪ್ರತಿಶತ) ಸ್ಥಾನದಲ್ಲಿದೆ. ಮಾಲ್ಡೀವ್ಸ್ ಮತ್ತು ಜಪಾನ್ ಒಟ್ಟಾರೆ ಲಂಚದ ಪ್ರಮಾಣದಲ್ಲಿ 2 ಪ್ರತಿಶತ ಉಳಿಸಿಕೊಂಡಿವೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಿದ್ಧಪಡಿಸಿದ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 2020ರಲ್ಲಿ ಭಾರತ 180 ದೇಶಗಳಲ್ಲಿ 80ನೇ ಸ್ಥಾನದಲ್ಲಿದೆ.
ವಿದೇಶಿ ನೇರ ಹೂಡಿಕೆಗಳ (ಎಫ್‌ಡಿಐ) ಕುಸಿತ, ಮೂಲಸೌಕರ್ಯ ಯೋಜನೆಗಳು, ಅಭಿವೃದ್ಧಿ ಯೋಜನೆಗಳ ಗುರಿಗಳ ಕುಂಠಿತ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ ಸಾಧನೆಯ ಹಿಂದೆ ಭ್ರಷ್ಟಾಚಾರವಿದೆ. ರಾಜಕೀಯದಲ್ಲಿ ಹಣದ ಪ್ರಭಾವವನ್ನು ವಿಶ್ಲೇಷಿಸಿದ್ದು, ಬಂಡವಾಳಶಾಹಿಗಳು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ದೇಶಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳಿದೆ.