ನವದೆಹಲಿ : ಬಜೆಟ್ ತಯಾರಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ನಿಭಾಯಿಸುವಲ್ಲಿ ವಿಶ್ವದ 117 ರಾಷ್ಟ್ರಗಳ ಪೈಕಿ ಭಾರತ 53ನೇ ಸ್ಥಾನದಲ್ಲಿದೆ ಎಂದು ಓಪನ್ ಬಜೆಟ್ ಸರ್ವೆ ತಿಳಿಸಿದೆ.
ಭಾರತ ಗಣರಾಜ್ಯದ ಬಜೆಟ್ ತಯಾರಿಕೆಯ ಪಾರದರ್ಶಕತೆಗೆ 100ಕ್ಕೆ 49 ಅಂಕಗಳನ್ನು ನೀಡಲಾಗಿದೆ. ಇದು ವಿಶ್ವದ ರಾಷ್ಟ್ರಗಳ ಸರಾಸರಿ ಅಂಕ 45ಕ್ಕಿಂತಲೂ ಹೆಚ್ಚಾಗಿದೆ ಎಂದು ಸರ್ವೆ ನಡೆಸಿದ ಇಂಟರನ್ಯಾಷನಲ್ ಬಜೆಟ್ ಪಾರ್ಟನರ್ಶಿಪ್ (IBP) ಸಂಸ್ಥೆ ಹೇಳಿದೆ. ಈ ಪಟ್ಟಿಯಲ್ಲಿ 87 ಅಂಕಗಳೊಂದಿಗೆ ನ್ಯೂಜಿಲೆಂಡ್ ಅಗ್ರ ಸ್ಥಾನದಲ್ಲಿದೆ.
ಚೀನಾ ಹೊರತುಪಡಿಸಿದರೆ ಇನ್ನೂ ಕೆಲ ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತಕ್ಕಿಂತ ಹೆಚ್ಚು ಅಂಕ ಪಡೆದಿವೆ. ದಕ್ಷಿಣ ಆಫ್ರಿಕಾ (87), ಮೆಕ್ಸಿಕೊ (82) ಮತ್ತು ಬ್ರೆಜಿಲ್ (81) ಇವು ಬಜೆಟ್ ತಯಾರಿಸುವ ಮುನ್ನ ಪರಿಶೀಲನೆಗಾಗಿ ಸಾರ್ವಜನಿಕರಿಗೆ ಹೆಚ್ಚು ಮಾಹಿತಿ ನೀಡುವ ರಾಷ್ಟ್ರಗಳಾಗಿವೆ.
ಆಡಿಟ್ ಹಾಗೂ ವಾರ್ಷಿಕ ವರದಿಗಳನ್ನು ಸಕಾಲಕ್ಕೆ ಮತ್ತು ಸೂಕ್ತ ಮಾಹಿತಿಯೊಂದಿಗೆ ನೀಡುವಲ್ಲಿ ಭಾರತ ಇತರ ಕೆಲ ರಾಷ್ಟ್ರಗಳಿಗಿಂತ ಮುಂದಿದೆ. ಬಜೆಟ್ ಪೂರ್ವ ಪ್ರಕಟಣೆ ನೀಡದಿರುವುದು ಹಾಗೂ 2018-19ನೇ ಸಾಲಿನಲ್ಲಿ ಮಧ್ಯವಾರ್ಷಿಕ ಸಮೀಕ್ಷೆಗಳನ್ನು ಪ್ರಕಟಿಸದಿರುವ ಕಾರಣಗಳಿಂದ ಪಾರದರ್ಶಕ ಸೂಚ್ಯಂಕದಲ್ಲಿ ಭಾರತಕ್ಕೆ ಕೆಲ ಮಟ್ಟಿಗೆ ಹಿನ್ನಡೆಯಾಗಿದೆ.
ಪ್ರಸ್ತುತ ಕೊರೊನಾ ವೈರಸ್ ಬಿಕ್ಕಟ್ಟಿನ ಕಾರಣದಿಂದ ಸಾರ್ವಜನಿಕ ಖರ್ಚು ವೆಚ್ಚಗಳನ್ನು ಸರ್ಕಾರ ಹೊರಗಿನಿಂದ ತಂದ ಹಣಕಾಸು ಮೂಲಗಳಿಂದ ನಿಭಾಯಿಸಬೇಕಾಗುತ್ತದೆ. ಇದು ಪ್ರಸಕ್ತ ಹಣಕಾಸು ವರ್ಷ ಮಾತ್ರವಲ್ಲದೆ ಮುಂದಿನ ಕೆಲ ವರ್ಷಗಳಿಗೂ ಮುಂದುವರಿಯುವುದರಿಂದ, ವಿತ್ತೀಯ ಶಿಸ್ತು ಮೂಡಿಸಲು ಬಜೆಟ್ ತಯಾರಿಕೆಯಲ್ಲಿ ಪಾರದರ್ಶಕತೆ ಕಾಪಾಡುವುದು ಈಗ ಮತ್ತೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.