ಹೈದರಾಬಾದ್: 2019-20ನೇ ಹಣಕಾಸು ವರ್ಷದ (2020-2021ರ ಮೌಲ್ಯಮಾಪನ) ನೂತನ ಐಟಿಆರ್-1 (ಇ-ಫಾರ್ಮ್) ಸಲ್ಲಿಸುವ ಪ್ರಕ್ರಿಯೆಯನ್ನು ಆದಾಯ ತೆರಿಗೆ ಇಲಾಖೆ ಆರಂಭಿಸಿದೆ. ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿರುವ ಐಟಿಆರ್-1 ಫಾರ್ಮ್ ಬಳಸಿ ನಾಗರಿಕರು ಸುಲಭವಾಗಿ 2019-20ನೇ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡಬಹುದಾಗಿದೆ. "ಸಹಜ್" ಎಂದೂ ಕರೆಯಲಾಗುವ ಐಟಿಆರ್-1 ಫಾರ್ಮ್ ಬಳಸಿ 50 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರು ಐಟಿ ರಿಟರ್ನ್ ಫೈಲ್ ಮಾಡಬಹುದು.
ಐಟಿಆರ್-1 ಫಾರ್ಮ್ ಯಾರೆಲ್ಲಾ ಸಲ್ಲಿಸಬಹುದು ಮತ್ತು ಫಾರ್ಮ್ ತುಂಬುವುದು ಹೇಗೆ?
1. ಭಾರತೀಯ ನಿವಾಸಿ ವ್ಯಕ್ತಿಗಳು ಈ ರಿಟರ್ನ್ ಸಲ್ಲಿಸಬಹುದು
2. ಸಂಬಳ ಅಥವಾ ಪೆನ್ಷನ್ ಪಡೆಯುತ್ತಿರುವವರು
3. ಎನ್ಆರ್ಐಗಳು ಐಟಿಆರ್-1 ಫಾರ್ಮ್ ಸಲ್ಲಿಸಲು ಅವಕಾಶವಿಲ್ಲ
4. ಒಟ್ಟು ವಾರ್ಷಿಕ ಆದಾಯ 50 ಲಕ್ಷ ರೂ. ಮೀರದ ಭಾರತೀಯ ನಿವಾಸಿ
5. ಒಂದು ಮನೆಯ ಆಸ್ತಿಯಿಂದ ಆದಾಯ ಪಡೆಯುವವರು (ಹಿಂದಿನ ವರ್ಷದ ನಷ್ಟವನ್ನು ಪ್ರಸಕ್ತ ವರ್ಷ ತೋರಿಸಲಾಗುವ ಸಂದರ್ಭ ಹೊರತುಪಡಿಸಿ)
6. ಇತರೆ ಮೂಲಗಳಿಂದ ಅಂದರೆ ಬಡ್ಡಿಯಿಂದ ಬರುವ ಆದಾಯ (ಲಾಟರಿ ಟಿಕೆಟ್ ಬಹುಮಾನ ಮತ್ತು ಕುದುರೆ ಜೂಜಿನಿಂದ ಬಂದ ಆದಾಯ ಹೊರತುಪಡಿಸಿ)
7. ವರ್ಷಕ್ಕೆ 5 ಸಾವಿರ ರೂ.ಗಳವರೆಗೆ ಕೃಷಿ ಆದಾಯ
ಐಟಿಆರ್ ಫಾರ್ಮ್-1 ಯಾರೆಲ್ಲಾ ಬಳಸುವಂತಿಲ್ಲ?
1. ಒಟ್ಟು ಆದಾಯ 50 ಲಕ್ಷ ರೂ.ಗಿಂತ ಹೆಚ್ಚಿರುವವರು
2. 5 ಸಾವಿರ ರೂ. ಮೀರಿದ ಕೃಷಿ ಆದಾಯ
3. ತೆರಿಗೆ ವಿಧಿಸಬಹುದಾದ ಕ್ಯಾಪಿಟಲ್ ಗೇನ್ ಆದಾಯ ಹೊಂದಿರುವವರು
4. ವೃತ್ತಿ ಅಥವಾ ವ್ಯಾಪಾರದಿಂದ ಆದಾಯ ಪಡೆಯುತ್ತಿರುವವರು
5. ಒಂದಕ್ಕಿಂತ ಹೆಚ್ಚು ಮನೆಗಳಿಂದ ಆದಾಯ ಬರುತ್ತಿದ್ದರೆ
6. ಕಂಪನಿಯ ನಿರ್ದೇಶಕರಾಗಿರುವವರು
7. ನಿರ್ದಿಷ್ಟ ಹಣಕಾಸು ವರ್ಷದ ಯಾವುದೇ ಅವಧಿಯಲ್ಲಿ ಲಿಸ್ಟ್ ಆಗದ ಇಕ್ವಿಟಿ ಶೇರುಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ
8. ಭಾರತದ ನಿವಾಸಿಯಾಗಿದ್ದು, ಹೊರ ದೇಶದಲ್ಲಿ ಆಸ್ತಿ ಹೊಂದಿದ್ದರೆ (ಹೊರ ದೇಶದಲ್ಲಿನ ಯಾವುದೇ ಕಂಪನಿಯಲ್ಲಿ ಹಣಕಾಸು ಹೂಡಿಕೆ ಮಾಡಿರುವುದನ್ನು ಸೇರಿಸಿ) ಅಥವಾ ಭಾರತ ಬಿಟ್ಟು ಬೇರಾವುದೇ ದೇಶದಲ್ಲಿನ ಅಕೌಂಟಿಗೆ ಸಹಿ ಹಾಕುವ ಅಧಿಕಾರ ಹೊಂದಿರುವವರು
9. ಒಂದು ವೇಳೆ ನೀವು ಆರ್ಎನ್ಆರ್ಓ ಆಗಿದ್ದಲ್ಲಿ ಅಥವಾ ನಾನ್-ರೆಸಿಡೆಂಟ್ ಆಗಿದ್ದಲ್ಲಿ
10. ವಿದೇಶಗಳಿಂದ ಆದಾಯ ಬರುತ್ತಿದ್ದಲ್ಲಿ
11. ಬೇರೊಬ್ಬ ವ್ಯಕ್ತಿಯ ಆದಾಯ ತೆರಿಗೆ ಮೌಲ್ಯಮಾಪನ ಪ್ರಕ್ರಿಯೆಗೆ ನೀವೂ ಒಳಪಟ್ಟಿದ್ದಲ್ಲಿ
ಐಟಿಆರ್ ಫಾರ್ಮ್-1ರಲ್ಲಿನ ಪ್ರಮುಖ ಬದಲಾವಣೆ
1 ಏಪ್ರಿಲ್ 2020ರಿಂದ 30 ಜೂನ್ 2020ರವರೆಗೆ ತೆರಿಗೆ ಉಳಿತಾಯ ಹೂಡಿಕೆಯ ಕಡಿತಗಳನ್ನು ಕ್ಲೇಮ್ ಮಾಡುವ ಅವಕಾಶವನ್ನು ಐಟಿಆರ್ ಫಾರ್ಮ್-1ರಲ್ಲಿ ಕಲ್ಪಿಸಿರುವುದು ಅತ್ಯಂತ ಪ್ರಮುಖ ಬದಲಾವಣೆಯಾಗಿದೆ. ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು 2019-20ನೇ ಹಣಕಾಸು ವರ್ಷದ ತೆರಿಗೆ ಉಳಿತಾಯ ಕ್ಲೇಮ್ ಅವಧಿಯನ್ನು ವಿಸ್ತರಿಸಿದ್ದಾರೆ.
ಐಟಿಆರ್ ಫಾರ್ಮ್-1ರಲ್ಲಿನ ಇನ್ನಿತರ ಬದಲಾವಣೆಗಳು
1. ಪಾರ್ಟ್ ಎನಲ್ಲಿ ನೇಚರ್ ಆಫ್ ಎಂಪ್ಲಾಯಮೆಂಟ್ ವಿಭಾಗದಲ್ಲಿ ಪೆನ್ಷನರ್ಸ್ ಚೆಕ್ ಬಾಕ್ಸ್ ನೀಡಲಾಗಿದೆ.
2. ರಿಟರ್ನ್ ಫೈಲಿಂಗ್ಗಳನ್ನು ನಾರ್ಮಲ್ ರಿಟರ್ನ್ ಹಾಗೂ ನೋಟಿಸಿಗೆ ಉತ್ತರವಾಗಿ ರಿಟರ್ನ್ ಎಂದು ವಿಂಗಡಿಸಲಾಗಿದೆ.
3. ಸ್ಯಾಲರಿ (ಸಂಬಳ) ಅಡಿಯ ಕಡಿತಗಳನ್ನು ಸ್ಟ್ಯಾಂಡರ್ಡ್ ಡಿಡಕ್ಷನ್, ಮನರಂಜನಾ ಭತ್ಯೆ ಮತ್ತು ಪ್ರೊಫೆಷನಲ್ ತೆರಿಗೆಗಳಾಗಿ ವಿಂಗಡಿಸಲಾಗಿದೆ.
4. ಇತರೆ ಮೂಲಗಳಿಂದ ಆದಾಯ ವಿಭಾಗದಲ್ಲಿ ತೆರಿಗೆದಾತನು ತಾನು ಪಡೆಯುತ್ತಿರುವ ಎಲ್ಲ ಇತರೆ ಮೂಲಗಳ ಆದಾಯಗಳನ್ನು ವಿವರವಾಗಿ ಸಲ್ಲಿಸಬೇಕು.
5. ಕುಟುಂಬ ಪಿಂಚಣಿ ಯೋಜನೆ ಇದ್ದು, ಸೆಕ್ಷನ್ 57 (iia) ಇತರೆ ಮೂಲಗಳಿಂದ ಆದಾಯ ತೆರಿಗೆ ಕಡಿತಕ್ಕಾಗಿ ಪ್ರತ್ಯೇಕ ಕಾಲಂ ನೀಡಲಾಗಿದೆ.
6. ಆಸ್ತಿಯನ್ನು ಬಾಡಿಗೆಗೆ ಬಿಡಲಾಗಿದೆ ಎಂದು ತಿಳಿಯಲಾಗಿದೆ (Deemed to be let out property) ಎಂಬ ಆಪ್ಷನ್, ಈಗ ಮನೆ ಆಸ್ತಿಯ ಆದಾಯ (Income from house property) ವಿಭಾಗದಡಿ ಸಿಗುತ್ತದೆ.
7. ಹಿರಿಯ ನಾಗರಿಕರಿಗಾಗಿ ಸೆಕ್ಷನ್ 80TTB ಕಾಲಂ ಸೇರಿಸಲಾಗಿದೆ.
ಹೊಸ ಹೆಚ್ಚುವರಿ ಪ್ರಶ್ನೆಗಳು
ಪ್ರಸ್ತುತ ವರ್ಷದ ಐಟಿಆರ್ ಫಾರ್ಮ್-1ರಲ್ಲಿ 3 ಹೆಚ್ಚುವರಿ ಪ್ರಶ್ನೆಗಳನ್ನು ಅಳವಡಿಸಲಾಗಿದೆ. ಚಾಲ್ತಿ ಖಾತೆಯಲ್ಲಿನ ಡಿಪಾಸಿಟ್, ವಿದೇಶ ಪ್ರಯಾಣ ಖರ್ಚು ಹಾಗೂ ವಿದ್ಯುಚ್ಛಕ್ತಿ ಬಿಲ್ ಕುರಿತಾಗಿ ಈ ಪ್ರಶ್ನೆಗಳಿವೆ. ಐಟಿಆರ್ ಫಾರ್ಮ್-1ರಲ್ಲಿರುವ ಹೊಸ 3 ಪ್ರಶ್ನೆಗಳು ಕೆಳಗಿನಂತಿವೆ:
1. ಕಳೆದ ಹಣಕಾಸು ವರ್ಷದಲ್ಲಿ ಒಂದು ಅಥವಾ ಅದಕ್ಕೂ ಹೆಚ್ಚಿನ ಚಾಲ್ತಿ ಖಾತೆಗಳಲ್ಲಿ ಒಂದು ಕೋಟಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ನೀವು ಡಿಪಾಸಿಟ್ ಮಾಡಿದ್ದೀರಾ? ಹೌದು/ಇಲ್ಲ
2. ನೀವು ನಿಮ್ಮ ವಿದೇಶ ಪ್ರಯಾಣಕ್ಕಾಗಿ ಅಥವಾ ಇನ್ನಾವುದೇ ವ್ಯಕ್ತಿಯ ವಿದೇಶ ಪ್ರಯಾಣಕ್ಕಾಗಿ 2 ಲಕ್ಷ ರೂ. ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿರುವಿರಾ? ಹೌದು/ಇಲ್ಲ
3. ಕಳೆದ ಹಣಕಾಸು ವರ್ಷದಲ್ಲಿ 1 ಲಕ್ಷ ರೂ. ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ವಿದ್ಯುಚ್ಛಕ್ತಿ ಬಿಲ್ ಪಾವತಿಸಿರುವಿರಾ? ಹೌದು/ಇಲ್ಲ
ಐಟಿಆರ್ ಫಾರ್ಮ್-1 ಬಳಸಿ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ?
ಎರಡು ಮಾದರಿಗಳಲ್ಲಿ ತೆರಿಗೆದಾತರು ಐಟಿಆರ್ ಫಾರ್ಮ್-1 ಸಲ್ಲಿಸಬಹುದಾಗಿದೆ.
1. ಇ-ಫೈಲಿಂಗ್ ವೆಬ್ಸೈಟ್ನಲ್ಲಿ ಲಭ್ಯವಿರುವ XML ಫೈಲ್ ಡೌನ್ಲೋಡ್ ಮಾಡಿಕೊಂಡು ಅದನ್ನು ತುಂಬಿ ಅಪ್ಲೋಡ್ ಮಾಡಬಹುದು.
2. ಇ-ಫೈಲಿಂಗ್ ವೆಬ್ಸೈಟ್ಗೆ ಲಾಗಿನ್ ಮಾಡುವ ಮೂಲಕ ಅಥವಾ ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಿ ನೇರವಾಗಿ ಆನ್ಲೈನ್ನಲ್ಲಿ ಫಾರ್ಮ್ ತುಂಬಿ ಸಲ್ಲಿಸಬಹುದು.
ಹಣಕಾಸು ವರ್ಷ ಅವಧಿಯನ್ನು ವಿಸ್ತರಿಸಲಾಗಿಲ್ಲ!
ಕಳೆದ ಹಣಕಾಸು ವರ್ಷದ ಅವಧಿಯನ್ನು ವಿಸ್ತರಣೆ ಮಾಡಲಾಗಿಲ್ಲ ಮತ್ತು ಅದು 31 ಮಾರ್ಚ್ 2020ರಂದೇ ಕೊನೆಗೊಂಡಿದೆ ಎಂಬುದು ಗಮನದಲ್ಲಿರಲಿ. ಹಣಕಾಸು ವರ್ಷ 2019-20ನೇ ಸಾಲಿನಲ್ಲಿ ಮಾಡಲಾದ ತೆರಿಗೆ ಉಳಿತಾಯ ಹೂಡಿಕೆಗಳ ಅವಧಿಯನ್ನು ಮಾತ್ರ 30 ಜೂನ್ 2020ರವರೆಗೆ ವಿಸ್ತರಿಸಲಾಗಿದೆ. ಅಂದರೆ ಮಾರ್ಚ್ 31ರವರೆಗೆ ಸೆಕ್ಷನ್ 80ಸಿ ಅಡಿ ಎಲ್ಐಸಿ, ಪಿಪಿಎಫ್, ಎನ್ಎಸ್ಸಿ ಮುಂತಾದವುಗಳಲ್ಲಿ ಹೂಡಿಕೆ ಮಾಡಿದ್ದನ್ನು ಅಥವಾ ಅವುಗಳಿಂದ ಆದಾಯ ಪಡೆದಿದ್ದನ್ನು, 80 ಡಿ ಅಡಿ ಮೆಡಿಕ್ಲೇಮ್ ಮತ್ತು 80ಜಿ ಅಡಿ ದೇಣಿಗೆ ಸಂದಾಯ ಮಾಡಿದ್ದನ್ನು ಈಗ ಜೂನ್ 30 2020ರವರೆಗೂ ತೆರಿಗೆ ಉಳಿತಾಯವನ್ನು ಕ್ಲೇಮ್ ಮಾಡಬಹುದಾಗಿದೆ.
ನೆನಪಿರಲಿ: ಐಟಿ ರಿಟರ್ನ್ ಫೈಲ್ ಮಾಡಲು ಕೊನೆಯ ದಿನಾಂಕ ನವೆಂಬರ್ 30
(ಲೇಖನ: ಇಂದು ಚೌಧರಿ, ಅಂಕಣಗಾರ್ತಿ ಮತ್ತು ಹಣಕಾಸು ತಜ್ಞರು)
(ಡಿಸಕ್ಲೇಮರ್: ಮೇಲಿನ ಲೇಖನವನ್ನು ಲೇಖಕಿಯು ತನ್ನ ಸ್ವಂತ ಸಂಶೋಧನೆಯ ಮೂಲಗಳಿಂದ ಬರೆದಿರುತ್ತಾರೆ. ಇದರ ಕುರಿತಾಗಿ ಈಟಿವಿ ಭಾರತ್ ಯಾವುದೇ ಜವಾಬ್ದಾರಿ ಅಥವಾ ಬಾಧ್ಯತೆಯನ್ನು ಹೊಂದಿರುವುದಿಲ್ಲ.
ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಏನಾದರೂ ವೈಯಕ್ತಿಕ ಪ್ರಶ್ನೆಗಳಿದ್ದಲ್ಲಿ ಇಮೇಲ್ ಐಡಿ businessdesk@etvbharat.comಗೆ ಕಳುಹಿಸಬಹುದು. ನಮ್ಮ ಹಣಕಾಸು ತಜ್ಞರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.