ನವದೆಹಲಿ: ಆದಾಯ ತೆರಿಗೆ ಇಲಾಖೆಯ ವೆಬ್ ಪೋರ್ಟಲ್‌ನಲ್ಲಿನ ಸಮಸ್ಯೆಯನ್ನು ಸೆಪ್ಟೆಂಬರ್ 15ರೊಳಗೆ ಸರಿಪಡಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇನ್ಫೋಸಿಸ್ ಸಿಇಒ ಹಾಗೂ ಇತರೆ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಸಚಿವರು, ಪೋರ್ಟಲ್ ಪ್ರಾರಂಭವಾಗಿ ಎರಡು ತಿಂಗಳ ನಂತರವೂ ದೋಷಗಳು ಮುಂದುವರಿದಿರುವುದು ಯಾಕೆ ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪೋರ್ಟಲ್‌ನಲ್ಲಿನ ದೋಷದಿಂದ ಆದಾಯ ತೆರಿಗೆ ಇಲಾಖೆಗೆ ಹಾಗೂ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಸಚಿವರು ವಿವರಿಸಿದ್ದಾರೆ. ಸಮಸ್ಯೆಯನ್ನು ಸರಿಪಡಿಸಲು ಇನ್ಫೋಸಿಸ್ ಮತ್ತಷ್ಟು ತಜ್ಞರ ಬಳಕೆ ಸೇರಿ ಹೆಚ್ಚಿನ ಸಂಪನ್ಮೂಲ ಹಾಗೂ ಪ್ರಯತ್ನಗಳು ಮಾಡುವ ಅವಶ್ಯಕತೆ ಇದೆ ಎಂದು ಸೀತಾರಾಮನ್ ಒತ್ತಿ ಹೇಳಿದ್ದಾರೆ.
ತಮ್ಮ ತಂಡವು ಪೋರ್ಟಲ್‌ನ ಸುಗಮ ಕಾರ್ಯನಿರ್ವಹಣೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. 750ಕ್ಕೂ ಹೆಚ್ಚು ಸದಸ್ಯರು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ಫೋಸಿಸ್ ಸಿಒಒ ಪ್ರವೀಣ್ ರಾವ್ ವೈಯಕ್ತಿಕವಾಗಿ ಇದನ್ನು ನೋಡಿಕೊಳ್ಳುತ್ತಿದ್ದಾರೆ. ಪೋರ್ಟಲ್‌ನಲ್ಲಿ ತೆರಿಗೆ ಪಾವತಿದಾರರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಇನ್ಫೋಸಿಸ್ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್, ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಐಟಿ ಪೋರ್ಟಲ್‌ನ ತಾಂತ್ರಿಕ ಸಮಸ್ಯೆಗಳನ್ನ ಶೀಘ್ರದಲ್ಲೇ ಬಗೆಹರಿಸುತ್ತೇವೆ: ಸಚಿವೆ ನಿರ್ಮಲಾ ಸೀತಾರಾಮನ್
ಆದಾಯ ತೆರಿಗೆ ಇ-ಫೈಲಿಂಗ್ ಸಮಸ್ಯೆ ವಿಚಾರವಾಗಿ ಸಚಿವೆ ಸೀತಾರಾಮನ್ ಇನ್ಫೋಸಿಸ್ ತಂಡವನ್ನು ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿ. ಜೂನ್ 22 ರಂದು ಪರೇಖ್ ಮತ್ತು ರಾವ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು.
ಹೊಸ ಪೋರ್ಟಲ್ ಅಭಿವೃದ್ಧಿಪಡಿಸಲು ಇನ್ಫೋಸಿಸ್ 2019 ರಲ್ಲಿ 4,242 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯು ಮುಂದಿನ ಪೀಳಿಗೆಯ ಆದಾಯ ತೆರಿಗೆ ಸಲ್ಲಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದು, ರಿಟರ್ನ್ಸ್ ಪ್ರಕ್ರಿಯೆಯ ಸಮಯವನ್ನು 63 ದಿನಗಳಿಂದ ಒಂದು ದಿನಕ್ಕೆ ತಗ್ಗಿಸುತ್ತದೆ. ಜೊತೆಗೆ ಮರುಪಾವತಿಯನ್ನು ತ್ವರಿತಗೊಳಿಸುತ್ತದೆ. 2019ರ ಜನವರಿಯಿಂದ 2021ರ ಜೂನ್ ನಡುವೆ ಸರ್ಕಾರವು ಪೋರ್ಟಲ್ ಅಭಿವೃದ್ಧಿಗಾಗಿ ಇನ್ಫೋಸಿಸ್‌ಗೆ 164.5 ಕೋಟಿ ರೂಪಾಯಿ ಪಾವತಿಸಿದೆ.