ನವದೆಹಲಿ: ಅಂತಾರಾಷ್ಟ್ರೀಯ ಬೆಂಚ್ಮಾರ್ಕ್ನಲ್ಲಿ ಬ್ರೆಂಟ್ ಕಚ್ಚಾ ಫ್ಯೂಚರ್ ತೈಲವು ಬ್ಯಾರೆಲ್‌ಗೆ ಶೇ 30ರಷ್ಟು ಕುಸಿದು 31.02 ಡಾಲರ್ಗೆ ಇಳಿದಿದೆ. ಇದು ಫೆಬ್ರವರಿ 2016ರ ನಂತರದ ಅತ್ಯಂತ ಕಡಿಮೆ ಮಟ್ಟದಾಗಿದೆ.
ಮತ್ತೊಂದೆಡೆ ಪ್ರಮುಖ ಕಚ್ಚಾ ತೈಲವಾದ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (ಡಬ್ಲ್ಯುಟಿಐ) ಬ್ಯಾರೆಲ್‌ಗೆ ಶೇ 27ರಷ್ಟು ಇಳಿದು 30 ಡಾಲರ್ಗೆ ತಲುಪಿದೆ.
ಏಕಾಏಕಿ ಬೆಲೆ ಕುಸಿತಕ್ಕೆ ಕಾರಣವೇನು?
ತೈಲ ಉತ್ಪಾದನಾ ಕಡಿತದ ಬಗ್ಗೆ ಸೌದಿ ಅರೇಬಿಯಾ ಮತ್ತು ರಷ್ಯಾ ಒಪ್ಪಂದಕ್ಕೆ ಬರಲು ವಿಫಲವಾಗಿದ್ದು, ಬೆಲೆಗಳ ಹಠಾತ್ ಕುಸಿತಕ್ಕೆ ಪ್ರಾಥಮಿಕ ಕಾರಣವಾಗಿದೆ. ಕೊರೊನಾದಿಂದ ಉದ್ಭವಿಸಿರುವ ಮಾರುಕಟ್ಟೆ ಕುಸಿತವನ್ನು ನಿಯಂತ್ರಣಕ್ಕೆ ತರಲು 2020ರ ಎರಡನೇ ತ್ರೈಮಾಸಿಕದಲ್ಲಿ ತೈಲ ಉತ್ಪಾದನೆಯನ್ನು ದಿನಕ್ಕೆ 1.5 ಮಿಲಿಯನ್ ಬ್ಯಾರೆಲ್‌ಗಳಷ್ಟು (ಬಿಪಿಡಿ) ಕಡಿತಗೊಳಿಸಲು ಒಪೆಕ್ ಗುರುವಾರ ಒಪ್ಪಿಕೊಂಡಿತು. ಆದರೆ, ರಷ್ಯಾ ಇದಕ್ಕೆ ಹಿಂದೇಟು ಹಾಕಿದೆ. ರಷ್ಯಾ ಪ್ರತಿಸ್ಪರ್ಧಿಯಾಗಿ ಸೌದಿ ಅರೇಬಿಯಾ ಕೋಪಗೊಂಡು ಧಿಡೀರನೆ ಇಳಿಸಿದೆ.
ಉತ್ಪಾದನೆ ಹೆಚ್ಚಿಸುವ ಸೌದಿ ಯೋಜನೆಗಳಲ್ಲದೆ ಅಮೆರಿಕ, ಬ್ರೆಜಿಲ್, ಕೆನಡಾ ಮತ್ತು ನಾರ್ವೆಯ ಸರಬರಾಜು ಹೆಚ್ಚಳದ ನಡುವೆಯೂ ಚೀನಾದ ಬೇಡಿಕೆ ಕುಸಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಕೆಯಾಗದೆ ಸಂಗ್ರಹವಾಗುತ್ತಿದೆ. ಈಗಿನ ಬೇಡಿಕೆ ಕುಸಿತ ಚೇತರಿಸಿಕೊಳ್ಳಬೇಕಾದರೆ ಇನ್ನೂ 6-12 ತಿಂಗಳು ತೆಗೆದುಕೊಳ್ಳಬಹುದು.
ತೈಲ ದರ ಕುಸಿತದಿಂದ ಭಾರತಕ್ಕೆ ಲಾಭ ಹೇಗೆ?
ಭಾರತದ ದೇಶಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಜನವರಿ ಮಧ್ಯದಿಂದ ಸುಮಾರು 4 ರೂ. ನಷ್ಟು ಇಳಿದಿದ್ದು, ಇದು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಕುಸಿತವು ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಸಂಸ್ಕರಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಅಂತಾರಾಷ್ಟ್ರೀಯ ಇಂಧನ ದರಗಳ 15 ದಿನಗಳ ಸರಾಸರಿ ಮತ್ತು ವಿನಿಮಯ ದರದ ಅಂಶವನ್ನು ಪರಿಗಣನೆಗೆ ತೆಗೆದುಕೊಂದು ದೇಶಿಯ ಚಿಲ್ಲರೆ ಮಾರುಟ್ಟೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಗದಿಪಡಿಸಲಾಗುತ್ತದೆ.
ದೇಶಿಯ ತೈಲ ಬೆಲೆಗಳ ಮೇಲಿನ ಪರಿಣಾಮ ಅಂದಾಜು ಮಾಡಲು ಇನ್ನೂ ಒಂದು ವಾರ ತೆಗೆದುಕೊಳ್ಳುತ್ತದೆ. ಭಾರತ ಆಮದಿನಿಂದಲೇ ಶೇ 85ರಷ್ಟು ಕಚ್ಚಾ ತೈಲ ಬೇಡಿಕೆ ಪೂರೈಸುತ್ತದೆ. ಜಾಗತಿಕ ದರ ಕಡಿತವು ದೇಶಿಯವಾಗಿ ಅಭೂತಪೂರ್ವ ಲಾಭವಾಗಲಿದೆ. ಒಂದು ಅಂದಾಜಿನ ಪ್ರಕಾರ, ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 45 ಡಾಲರ್ಗೆ ತಲುಪಿದರೆ ಭಾರತಕ್ಕೆ 2 ಬಿಲಿಯನ್ ಡಾಲರ್ ಅಂದರೆ ₹ 14,000 ಕೋಟಿವರೆಗೆ ಉಳಿತಾಯ ಆಗಲಿದೆ.
ತೈಲ ಬೆಲೆ ಇಳಿಕೆಯಿಂದ ನೆರವು:
ತೈಲ ಬೆಲೆ ಇಳಿಕೆಯು ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು, ಇಂಧನ ಸಬ್ಸಿಡಿ ಕಡಿಮೆ ಮಾಡಲು, ಚಾಲ್ತಿ ಖಾತೆ ಕೊರತೆಯನ್ನು ಕಡಿತಗೊಳಿಸಲು ಮತ್ತು ಸಾರ್ವಜನಿಕ ಖರ್ಚಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ನೆರವಾಗಲಿದೆ.
ಒಂದು ಅಂದಾಜಿನ ಪ್ರಕಾರ, ಕಚ್ಚಾ ಬೆಲೆಯಲ್ಲಿ ಶೇ.10ರಷ್ಟು ಕಡಿತವು ಗ್ರಾಹಕ ಬೆಲೆ ಸೂಚ್ಯಂಕವನ್ನು ಕಡಿಮೆ ಮಾಡುತ್ತದೆ. ಹಣದುಬ್ಬರವು ಸುಮಾರು 20 ಬೇಸಿಸ್ ಪಾಯಿಂಟ್‌ಗಳ (ಬಿಪಿಎಸ್) ಮತ್ತು ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯಲ್ಲಿ 30 ಬಿಪಿಎಸ್ ಹೆಚ್ಚಳಕ್ಕೆ ಕಾರಣವಾಗುತ್ತದೆ.