ಮುಂಬೈ: ಸದಾ ವಾಣಿಜ್ಯ ಚಟುವಟಿಕೆಗಳಿಂದ ಕೂಡಿರುತ್ತಿದ್ದ ವಾಣಿಜ್ಯ ರಾಜಧಾನಿ ಮುಂಬೈ, ವರುಣನ ರುದ್ರ ನರ್ತನಕ್ಕೆ ಸಿಲುಕಿ ಸುಮಾರು 1,200 ಕೋಟಿಯಷ್ಟು ಆರ್ಥಿಕ ನಷ್ಟ ಅನುಭವಿಸಿದೆ.
ಸತತ ಮಳೆ, ಪ್ರವಾಹದಿಂದಾಗಿ ವಾಣಿಜ್ಯ ನಗರಿಯ ವ್ಯಾಪಾರ- ವಹಿವಾಟು, ಕೈಗಾರಿಕೆ, ಮಾರಾಟದಂತಹ ಚಟುವಟಿಕೆಗಳು ಸ್ಥಗತಿಗೊಂಡಿದ್ದು, ಆರ್ಥಿಕವಾಗಿ ದೊಡ್ಡ ಹೊಡೆತ ಬಿದ್ದಿದೆ. ನಷ್ಟದ ಅಂದಾಜು ಸುಮಾರು 1,200 ಕೋಟಿ ರೂ.ಯಷ್ಟು ಎಂದು ಹೇಳಲಾಗುತ್ತಿದೆ.
ಬ್ಯಾಂಕಿಂಗ್, ಹೋಟೆಲ್, ಮೀನುಗಾರಿಕೆ, ಪ್ರಯಾಣಿಕ ವಹಿವಾಟಿಗೂ ಅಡ್ಡಿಯಾಗಿದೆ. ಹಲವು ಬ್ಯಾಂಕ್ಗಳ ಎಟಿಎಂಗಳು ಕೂಡಾ ಸ್ಥಗಿತವಾಗಿವೆ. ಸಂಪರ್ಕ ಸಮಸ್ಯೆಯಿಂದ ಕಳೆದ ಎರಡು ದಿನಗಳಲ್ಲಿ ಎಟಿಎಂಗಳಲ್ಲಿ ನಗದು ಸಮಸ್ಯೆ ತಲೆದೂರಿತ್ತು. ಪರಿಣಾಮ, ಜನರು ಹಣವಿಲ್ಲದೆ ಪರದಾಡುವಂತಾಗಿತ್ತು.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 24 ಗಂಟೆಗಳಿಗೂ ಅಧಿಕ ಕಾಲ ಬಂದ್ ಮಾಡಲಾಗಿತ್ತು. 700ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದುಪಡಿಸಲಾಗಿತ್ತು. ಆದರೆ, ಇಂದು ಬೆಳಗ್ಗೆಯಿಂದ ಮತ್ತೆ ಆರಂಭಗೊಂಡಿವೆ.
ರೈಲ್ವೆ ಹಳಿಗಳು ಜಲಾವೃತ ಆಗಿದ್ದರಿಂದ ಅಗಸ್ಟ್ 6ವರೆಗೆ ದೂರ ಪ್ರಯಾಣದ ರೈಲ್ವೆಗಳ ಸಂಚಾರ ರದ್ದುಪಡಿಸಲಾಗಿದೆ. ಲಕ್ಷಾಂತರ ಜನರು ಮೊಬೈಲ್ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ. 50ಕ್ಕೂ ಅಧಿಕ ಲೋಕಲ್ ರೈಲುಗಳಿಗೆ ಹಾನಿಯಾಗಿದೆ. ಸಾರ್ವಜನಿಕರ ಆಟೋ, ಬೈಕ್, ಕಾರು, ಲಾರಿ, ಟೆಂಪೋಗಳು ಮಳೆಯ ಹೊಡತಕ್ಕೆ ಸಿಲುಕಿ ಹಾನಿಗೆ ಒಳಗಾಗಿವೆ.