ನವದೆಹಲಿ: ಇಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ 41ನೇ ಸಭೆಯನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. ಕೇಂದ್ರದ ಬಿಡುಗಡೆಯ ವಿಳಂಬದಿಂದ ಪೀಡಿತ ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ಏಕಮುಖ ಕಾರ್ಯಸೂಚಿ ಬಗ್ಗೆ ಚರ್ಚಿಸಲಾಯಿತು. ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಜಿಎಸ್ಟಿ ಬಾಕಿ ಪರಿಹಾರ ಬಗ್ಗೆ ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದೆ ಇರಿಸಲಾಯಿತು. ಆರ್‌ಬಿಐ ಜೊತೆ ಮಾತನಾಡಲು ನಾವು ಅನುಕೂಲ ಮಾಡಿಕೊಡುತ್ತೇವೆ ಮತ್ತು ಜಿ-ಸೆಕ್ಯೂರಿಟಿ ಲಿಂಕ್ಡ್ ಬಡ್ಡಿದರ ಪಡೆಯಲು ಸಹಾಯ ಮಾಡುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಇದರಿಂದ ಪ್ರತಿ ರಾಜ್ಯವು ಸಾಲಕ್ಕಾಗಿ ಹೆಣಗಾಡಬೇಕಾಗಿಲ್ಲ. ಎರಡೂ ಆಯ್ಕೆಗಳನ್ನು ವಿವರವಾಗಿ ತಿಳಿಸಲು ರಾಜ್ಯಗಳು ನಮ್ಮನ್ನು ವಿನಂತಿಸಿಕೊಂಡಿವೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು 7 ದಿನಗಳ ಸಮಯ ಕೇಳಿದ್ದೇವೆ ಎಂದು ತಿಳಿಸಿದರು.
ಈ ಆಯ್ಕೆಗಳು ಪ್ರಸಕ್ತ ವರ್ಷದಲ್ಲಿ ಮಾತ್ರ ಲಭ್ಯವಿರುತ್ತವೆ. ಮುಂದಿನ ವರ್ಷದಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಶೀಘ್ರದಲ್ಲೇ ನಾವು ಮತ್ತೊಂದು ಜಿಎಸ್ಟಿ ಮಂಡಳಿ ಸಭೆ ನಡೆಸುತ್ತೇವೆ. ಈ ಬಾಕಿಗಳನ್ನು ತೆರವುಗೊಳಿಸಿ ಉಳಿದ ಆರ್ಥಿಕ ವರ್ಷದ ಬಗ್ಗೆಯೂ ನಾವು ಕಾಳಜಿ ವಹಿಸಬೇಕಿದೆ. 2021ರ ಏಪ್ರಿಲ್ನಲ್ಲಿ ಕೌನ್ಸಿಲ್ 5ನೇ ವರ್ಷ ತನ್ನ ಕ್ರಮವನ್ನು ಪರಿಶೀಲಿಸಿ ನಿರ್ಧರಿಸಲಿದೆ ಎಂದು ರಾಜ್ಯಗಳಿಗೆ ಭರವಸೆ ನೀಡಿದರು.
ಕೇಂದ್ರವು ಆರ್‌ಬಿಐನಿಂದ ಸಾಲ ಪಡೆಯಲು ಅನುಕೂಲ ಮಾಡಿಕೊಡಲಿದೆ ಎಂದು ಪ್ರಸ್ತಾಪಿಸಲಾಗಿದೆ. ಆದರೆ, ಈ ಸಾಲಗಳನ್ನು ರಾಜ್ಯಗಳ ಹೆಸರಿನಲ್ಲಿ ವಿತರಿಸಲಾಗುವುದು ಎಂದು ಸೀತಾರಾಮನ್ ಹೇಳಿದರು. ಸಂಪೂರ್ಣ ವಾರ್ಷಿಕ ವರ್ಷದಲ್ಲಿ ಕೇಂದ್ರದ ಪರಿಹಾರ ನಿಧಿಯಲ್ಲಿ 2.35 ಲಕ್ಷ ಕೋಟಿ ರೂ. ಅಂತರವಿದೆ. ಕೋವಿಡ್-19 ಸೋಂಕು ಇದಕ್ಕೆ ಕಾರಣ ಎಂದು ಜಿಎಸ್ಟಿ ಮಂಡಳಿ ಹೇಳಿದೆ.
ರಾಜ್ಯಗಳ ಮುಂದಿರುವ ಎರಡು ಆಯ್ಕೆಗಳು:
ಆಯ್ಕೆ-1: ರಾಜ್ಯಗಳಿಗೆ ವಿಶೇಷ ಗವಾಕ್ಷಿ ಒದಗಿಸಲು, ಆರ್‌ಬಿಐಯೊಂದಿಗೆ ಸಮಾಲೋಚಿಸಿ 97,000 ಕೋಟಿ ರೂ. ಸಮಂಜಸ ಬಡ್ಡಿದರದಲ್ಲಿ ಸಾಲ ಒದಗಿಸಲಿದೆ. ಈ ಹಣವನ್ನು ಸೆಸ್ ಸಂಗ್ರಹದಿಂದ 5 ವರ್ಷಗಳ ನಂತರ ಮರುಪಾವತಿಸಬಹುದು.
ಆಯ್ಕೆ- 2: ರಾಜ್ಯಗಳಿಗೆ ಈ ವರ್ಷದ 2,35,000 ಕೋಟಿ ರೂ. ಸಂಪೂರ್ಣ ಜಿಎಸ್ಟಿ ಪರಿಹಾರದ ಅಂತರವನ್ನು ರಾಜ್ಯಗಳು ಆರ್‌ಬಿಐಯೊಂದಿಗೆ ಸಮಾಲೋಚಿಸಿ ಪೂರೈಸಬಹುದು.