ನವದೆಹಲಿ: ಈಗಾಗಲೇ ಕೋವಿಡ್ ಅಡೆತಡೆಗಳಿಂದ ಆದಾಯದ ಮೇಲೆ ತೀವ್ರ ಒತ್ತಡ ಎದುರಿಸುತ್ತಿರುವ ಕೇಂದ್ರ ಸರ್ಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಶೇ 30ರಷ್ಟು ಇಳಿಕೆಯೊಂದಿಗೆ ಕೊನೆಗೊಳಬಹುದು.
ಜಿಎಸ್‌ಟಿ ಸಂಬಂಧಿತ ಆದಾಯದ ಕೊರತೆಯನ್ನು ರಾಜ್ಯಗಳಿಗೆ ಸಮರ್ಪಕವಾಗಿ ಸರಿದೂಗಿಸುವ ಹೊರೆ ಹೊತ್ತಿರುವ ಕೇಂದ್ರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದರ ಮಧ್ಯೆ ಖಜಾನೆಗೆ ಬರಬೇಕಾದ ತೆರಿಗೆಯಲ್ಲಿ ಅಭಾವ ಸೃಷ್ಟಿಯಾಗಲಿದೆ.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ನ ಇಕೋಸ್ಕೋಪ್ ವರದಿಯ ಪ್ರಕಾರ, ಜಿಎಸ್‌ಟಿ ಸಂಗ್ರಹವು 2021ರ ಹಣಕಾಸು ವರ್ಷದಲ್ಲಿ 9-9.2 ಲಕ್ಷ ಕೋಟಿ ರೂ. ಸಂಗ್ರಹವಾಗಲಿದೆ. ಬಜೆಟ್ನಲ್ಲಿ ವಾರ್ಷಿಕ 13.8 ಲಕ್ಷ ಕೋಟಿ ರೂ. ಸಂಗ್ರಹಿಸುವ ಅಂದಾಜಿತ ಗುರಿ ಇರಿಸಿಕೊಳ್ಳಲಾಗಿತ್ತು.
ಅಕ್ಟೋಬರ್ ಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹವು 1.05 ಲಕ್ಷ ಕೋಟಿ ರೂ. ಆಗಿದ್ದು, 2019ರ ಇದೇ ತಿಂಗಳಿಗೆ ಹೋಲಿಸಿದರೆ ಶೇ 10.2ರಷ್ಟು ಹೆಚ್ಚಳವಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ಬಳಿಕ 2020ರ ಫೆಬ್ರವರಿ ನಂತರ ಸಂಗ್ರಹವಾದ ಅತ್ಯಧಿಕ ಮೊತ್ತವಾಗಿದೆ.
2020ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಪ್ರಮಾಣ 5.6 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 20.2ರಷ್ಟು ಕುಸಿದಿದೆ.
2021ರ ವಿತ್ತೀಯ ವರ್ಷಕ್ಕೆ 13.8 ಲಕ್ಷ ಕೋಟಿ ರೂ. ಸಂಗ್ರಹದ ಗುರಿ ಇರಿಸಿಕೊಂಡಿದ್ದ ಹಣಕಾಸು ಸಚಿವಾಲಯ, ಇದುವರೆಗೆ 5.6 ಲಕ್ಷ ಕೋಟಿ ರೂ.ಯಷ್ಟು ಸಂಗ್ರಹಿಸಲು ಶಕ್ತವಾಗಿದೆ. ಇದು 2021ರ ಬಜೆಟ್ ಅಂದಾಜಿತ (ಬಿಇ) ಶೇ 41ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 58ರಷ್ಟು (2020ರ ಬಿಇ) ಕಲೆಹಾಕಲಾಗಿತ್ತು.