ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಾಗ ಸರ್ಕಾರಗಳು ತಮ್ಮ ಕೊರತೆಗಳನ್ನು ಪೂರೈಸಲು ಸಾಲ ಪಡೆಯಬೇಕು. ಹೆಚ್ಚಿನ ತೆರಿಗೆಯ ಹೊರೆಗಳನ್ನು ಜನರ ಮೇಲೆ ವಿಧಿಸಬಾರದು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದರು.
ಕೇಂದ್ರ ಮತ್ತು ದೆಹಲಿ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ ಮರು ದಿನವೇ ವಾಗ್ದಾಳಿ ನಡೆಸಿದರು.
ಆರ್ಥಿಕತೆ ಪ್ರವರ್ಧಮಾನಕ್ಕೆ ಬಂದಾಗ ಮಾತ್ರ ಹೊಸ ಅಥವಾ ಹೆಚ್ಚಿನ ತೆರಿಗೆ ವಿಧಿಸುವುದು ಸಮರ್ಥನೀಯ. ಕೊರೊನಾ ಬಿಕ್ಕಟ್ಟಿನ ನಡುವೆಯೂ ತೆರಿಗೆ ವಿಧಿಸುವುದು ಕ್ರೂರವಾದ ನಡೆ ಎಂದು ಜರಿದರು.
'ಸರ್ಕಾರಗಳು ಸಂಕಷ್ಟದ ಸಮಯದಲ್ಲಿ ಜನರಿಗೆ ಹಣವನ್ನು ನೀಡಬೇಕು. ಅವರನ್ನು ಹಿಸುಕಬಾರದು ಮತ್ತು ಜನರಿಂದ ಹಣ ತೆಗೆದುಕೊಳ್ಳಬಾರದು' ಎಂದರು
ನಾವು ಸರ್ಕಾರದಿಂದ ಕೆಳಗಿನ ಅರ್ಧದಷ್ಟು ಜನರು/ ಕುಟುಂಬಗಳಿಗೆ ನಗದು ವರ್ಗಾವಣೆಗೆ ಮನವಿ ಮಾಡುತ್ತಿದ್ದೇವೆ. ಬದಲಾಗಿ ಸರ್ಕಾರಗಳು ಜನರ ಮೇಲೆ ತೆರಿಗೆ ಹೊರೆ ಹೇರುತ್ತಿವೆ. ಇದು ಕ್ರೂರ ಎಂದು ಕೆಂಡಕಾರಿದ್ದಾರೆ.
ಹೊಸ ಅಥವಾ ಹೆಚ್ಚಿನ ತೆರಿಗೆಗಳು ಕುಟುಂಬಗಳನ್ನು ಮತ್ತಷ್ಟು ಬಡತನಕ್ಕೆ ದೂಡುತ್ತವೆ ಎಂದು ಚಿದಂಬರಂ ಇದೇ ವೇಳೆ ಪ್ರತಿಪಾದಿಸಿದ್ದಾರೆ.