ನವದೆಹಲಿ: ರಫ್ತುಗಳ ಮೇಲೆ ತೀವ್ರ ನಿಗಾವಹಿಸಿದ್ದು, ಭಾರತವನ್ನು ನೈಜ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಸ್ಥಾಪಿಸುವತ್ತ ಕೇಂದ್ರ ಸರ್ಕಾರ ಅನೇಕ ವಲಯಗಳಲ್ಲಿ ಕೆಲಸ ಮಾಡುತ್ತಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
ವರ್ಚ್ಯುವಲ್ ಫಿಕ್ಕಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾಂತ್, ದೇಶೀಯ ಉತ್ಪಾದನೆ ವೃದ್ಧಿಗೆ ತನ್ನ ಉತ್ಪಾದನಾ - ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯನ್ನು ಹೆಚ್ಚಿನ ಕ್ಷೇತ್ರಗಳತ್ತ ವಿಸ್ತರಿಸುವ ಯೋಜನೆಯನ್ನು ಅಂತಿಮಗೊಳ್ಳುತ್ತಿದೆ ಎಂದರು.
ರಫ್ತುಗಳ ಮೇಲೆ ಆಸಕ್ತಿ ವಹಿಸಿ ತೀವ್ರ ಗಮನ ಹೊಂದಿದ್ದು, ಭಾರತವನ್ನು ನೈಜ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಸ್ಥಾಪಿಸಲು ಕೇಂದ್ರ ಸರ್ಕಾರ ಅನೇಕ ರಂಗಗಳಲ್ಲಿ ಕೆಲಸ ಮಾಡುತ್ತಿದೆ. ಆತ್ಮನಿರ್ಭರ ಭಾರತ ಎಂದರೆ ಸ್ವಯಂ - ಪ್ರತ್ಯೇಕತೆಯಲ್ಲ. ಜಾಗತಿಕ ಮೌಲ್ಯ ಸರಪಳಿಗಳಲ್ಲಿ ದೊಡ್ಡ ಶಕ್ತಿಯಾಗಿ ಮತ್ತು ಪ್ರಮುಖ ರಫ್ತುದಾರನಾಗಲು ಭಾರತವು ಉತ್ಪಾದನಾ ಶಕ್ತಿಯಾಗಿ ಹೊರಹೊಮ್ಮುವುದು ಎಂದು ವಿವರಿಸಿದರು.
ಹೂಡಿಕೆ ಮತ್ತು ನಾವೀನ್ಯತೆ ಭಾರತದಲ್ಲಿ ಉತ್ಪಾದನೆ ಹೆಚ್ಚಿಸುತ್ತಿದೆ. ಎರಡೂ ದೇಶಗಳ ಮತ್ತು ಕಂಪನಿಗಳು ತಮ್ಮ ವ್ಯಾಪಾರ ಮತ್ತು ಉತ್ಪಾದನಾ ಕಾರ್ಯತಂತ್ರಗಳನ್ನು ಮರುಮೌಲ್ಯಮಾಪನ ಮಾಡುತ್ತಿವೆ. ಇದು ಭಾರತದಲ್ಲಿ ಬೆಳವಣಿಗೆಯ ಹೊಸ ಮಾರ್ಗಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಕಾಂತ್ ತಿಳಿಸಿದರು.
ಐಫೋನ್ ತಯಾರಕ ಆ್ಯಪಲ್ನ ಗುತ್ತಿಗೆ ತಯಾರಕರು ಮತ್ತು ಸ್ಯಾಮ್ಸಂಗ್, ಲಾವಾ, ಡಿಕ್ಸನ್ ಸೇರಿದಂತೆ 22 ದೇಶೀಯ ಮತ್ತು ಅಂತಾರಾಷ್ಟ್ರೀಯ ಉತ್ಪಾದನಾ ಸಂಸ್ಥೆಗಳು ಮುಂದಿನ ಐದು ವರ್ಷಗಳಲ್ಲಿ 11 ಲಕ್ಷ ಕೋಟಿ ರೂ. ಮೊಬೈಲ್ ಫೋನ್ ಉತ್ಪಾದನೆಗೆ ಪ್ರಸ್ತಾಪ ಸಲ್ಲಿಸಿವೆ.
ಮೊಬೈಲ್ ಉತ್ಪಾದನೆ ಟೆಂಪ್ಲೇಟ್‌ನಂತೆ ತೆಗೆದುಕೊಂಡು, ಇದೇ ರೀತಿಯ ಯೋಜನೆಗಳನ್ನು ಔಷಧ, ವೈದ್ಯಕೀಯ ಸಾಧನ, ಆಟೋಮೊಬೈಲ್, ನೆಟ್‌ವರ್ಕಿಂಗ್ ಉತ್ಪನ್ನಗಳು, ಆಹಾರ ಸಂಸ್ಕರಣೆ, ಸುಧಾರಿತ ರಸಾಯನಿಕ ಪದಾರ್ಥಗಳು, ಸೌರಶಕ್ತಿ ಫಲಕದಂತಹ ಉತ್ಪಾದನೆ ಯೋಜನೆಗಳನ್ನು ಅಂತಿಮಗೊಳಿಸುತ್ತಿದ್ದೇವೆ ಎಂದರು.
ಮೊಬೈಲ್, ಎಲೆಕ್ಟ್ರಾನಿಕ್ಸ್, ಔಷಧ, ಜವಳಿ, ಇಂಜಿನಿಯರಿಂಗ್ ಉತ್ಪನ್ನಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳ ಉತ್ಪಾದನೆಯು 2025ರ ವೇಳೆಗೆ ಭಾರತವು ರಫ್ತು ಗುರಿಗಳನ್ನು ಮುನ್ನಡೆಸಲಿದೆ ಎಂದು ಹೇಳಿದರು.