ನವದೆಹಲಿ: ಬಂಡವಾಳ ಯೋಜನೆಗಳಿಗೆ ಖರ್ಚು ಮಾಡಲು 50 ವರ್ಷ ಬಡ್ಡಿರಹಿತ ಸಾಲವನ್ನು ರಾಜ್ಯಗಳಿಗೆ ಹೆಚ್ಚುವರಿ 15,000 ಕೋಟಿ ರೂ. ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
2021-22ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಖರ್ಚು ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಂಡವಾಳ ವೆಚ್ಚವು ಉದ್ಯೋಗ ಸೃಷ್ಟಿಸುತ್ತದೆ. ವಿಶೇಷವಾಗಿ ಬಡವರಿಗೆ ಮತ್ತು ಕೌಶಲ್ಯರಹಿತರ ಮೇಲೆ ಹೆಚ್ಚಿನ ಗುಣಾತ್ಮಕ ಪರಿಣಾಮ ಬೀರುತ್ತದೆ. ಆರ್ಥಿಕತೆಯ ಭವಿಷ್ಯದ ಉತ್ಪಾದಕ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಆರ್ಥಿಕ ಬೆಳವಣಿಗೆಯ ದರಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಕೇಂದ್ರ ಸರ್ಕಾರದ ಪ್ರತಿಕೂಲ ಆರ್ಥಿಕ ಸ್ಥಿತಿಯ ಹೊರತಾಗಿಯೂ ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ಸಹಾಯಕ್ಕಾಗಿ ಯೋಜನೆಯನ್ನು ಪ್ರಾರಂಭಿಸಲು ಕಳೆದ ವರ್ಷ ನಿರ್ಧರಿಸಲಾಯಿತು. ಈ ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲ ರೂಪದಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. 12,000 ಕೋಟಿ ರೂ. ಮೀರದ ಮೊತ್ತವನ್ನು 2020-21ಕ್ಕೆ ಮೀಸಲಿಡಲಾಗಿದ್ದು 11,830.29 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಸಾಂಕ್ರಾಮಿಕ ವರ್ಷದಲ್ಲಿ ರಾಜ್ಯ ಮಟ್ಟದ ಬಂಡವಾಳ ವೆಚ್ಚ ಉಳಿಸಿಕೊಳ್ಳಲು ಇದು ಸಹಾಯ ಮಾಡಿತು. ಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ರಾಜ್ಯ ಸರ್ಕಾರಗಳ ಕೋರಿಕೆಗಳನ್ನು ಪರಿಗಣಿಸಿ 2021-22ರಲ್ಲಿ ಯೋಜನೆಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.
ಯೋಜನೆಯ ಮೊದಲ ಭಾಗವು ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಿಗೆ ಮತ್ತು 2,600 ಕೋಟಿ ರೂ. ಅಸ್ಸೋಂ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಕ್ಕೆ ತಲಾ 400 ಕೋಟಿ ರೂ., ಈ ವ್ಯಾಪ್ತಿಯ ಉಳಿದ ರಾಜ್ಯಗಳಿಗೆ ತಲಾ 200 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಯೋಜನೆಯ ಎರಡನೇ ಭಾಗವು ಇತರ ಎಲ್ಲ ರಾಜ್ಯಗಳಿಗೆ 7,400 ಕೋಟಿ ರೂ. ಮೀಸಲಿದೆ.
2021-22ರ 15ನೇ ಹಣಕಾಸು ಆಯೋಗದ ಪ್ರಕಾರ ಈ ಮೊತ್ತವನ್ನು ರಾಜ್ಯಗಳ ನಡುವೆ ಕೇಂದ್ರ ತೆರಿಗೆಯ ಪಾಲು ಹಂಚಿಕೆ ಮಾಡಲಾಗಿದೆ. ಮೂಲಸೌಕರ್ಯ ಸ್ವತ್ತುಗಳ ಹಣಗಳಿಕೆ ಅಥವಾ ಮರುಬಳಕೆ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳ ಹೂಡಿಕೆಗಾಗಿ ರಾಜ್ಯಗಳಿಗೆ ಪ್ರೋತ್ಸಾಹ ನೀಡುವುದು ಯೋಜನೆಯ ಮೂರನೇ ಭಾಗವಾಗಿದೆ. 5,000 ಕೋಟಿ ರೂ. ಸ್ವತ್ತುಗಳ ಹಣಗಳಿಕೆ ಮತ್ತು ಹೂಡಿಕೆಯ ಮೂಲಕ ರಾಜ್ಯಗಳು ಶೇ 33ರಿಂದ 100ರವರೆಗೆ 50 ವರ್ಷಗಳ ತನಕ ಬಡ್ಡಿರಹಿತವಾಗಿ ಸಾಲ ಸ್ವೀಕರಿಸುತ್ತವೆ.