ನವದೆಹಲಿ: ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿದ್ದ 1,600ಕ್ಕೂ ಅಧಿಕ ವಸತಿ ಯೋಜನೆಗಳನ್ನು ಸ್ಥಗಿತಗೊಳಿಸಿ ವಸತಿ ಯೋಜನೆಗಳನ್ನು ಪುನರ್ ಆರಂಭಿಸಲು 25,000 ಕೋಟಿ ರೂ. ನಿಧಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ.
ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆಯಲ್ಲಿ ನಡೆದ ಕೆಲವು ವಿಷಯಗಳನ್ನು ಮಾಧ್ಯಮದವರ ಮುಂದಿಟ್ಟರು. ಕೇಂದ್ರ ಸರ್ಕಾರವು ಕೈಗೆಟುಕುವ ಹಾಗೂ ಮಧ್ಯಮ ಪ್ರಮಾಣದಲ್ಲಿ ಅರ್ಧಕ್ಕೆ ನಿಂತಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆಯ ಸಾಲ ಮತ್ತು ಹಣಕಾಸಿನ ನೆರವು ಒದಗಿಸಲಾಗುವುದು. ಇದಕ್ಕಾಗಿ ವಿಶೇಷ ವಿಭಾಗ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.
ಪರ್ಯಾಯ ಹೂಡಿಕೆ ನಿಧಿಯಲ್ಲಿ (ಎಐಎಫ್) ಕೇಂದ್ರ ಸರ್ಕಾರ ₹ 10,000 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹಾಗೂ ಭಾರತೀಯ ಜೀವ ವಿಮೆ (ಎಲ್ಐಸಿ) ₹ 15,000 ಕೋಟಿ ನೀಡಲಿದೆ. ಇದು ಒಟ್ಟು 25,000 ಕೋಟಿ ರೂ.ಯಷ್ಟು ದೊಡ್ಡ ಮೊತ್ತದ ನಿಧಿಯಾಗಲಿದೆ. ದೇಶಾದ್ಯಂತ 4.58 ಲಕ್ಷ ವಸತಿ ಘಟಕಗಳು ಸೇರಿ 1,600 ಸ್ಥಗಿತಗೊಂಡ ವಸಿತಿ ಯೋಜನೆಗಳಿಗೆ ಹಣದ ನೆರವು ಒದಗಿಸಿದಂತಾಗಲಿದೆ.
ಬಹುಸಂಖ್ಯೆಯ ಮಧ್ಯಮ ವರ್ಗದವರು ಕಷ್ಟಪಟ್ಟು ಕೂಡಿಟ್ಟು ಹೂಡಿಕೆ ಮಾಡಿದ ಗೃಹಬಳಕೆದಾರರಿಗೆ ಎದುರಾಗುತ್ತಿರುವ ಸಮಸ್ಯೆಗಳ ನಿವಾರಣೆಗೆ ಈ ನಿಧಿ ನೆರವಾಗಲಿದೆ. ಆರ್ಥಿಕತೆಯ ಉತ್ಪಾದಕತೆಗೂ ಸಹಾಯಕವಾಗಲಿದೆ ಎಂದರು.
ಕಳೆದ ಕೆಲವು ತಿಂಗಳಿಂದ ಗೃಹಬಳಕೆದಾರರು, ವಿವಿಧ ಸಂಘಗಳು, ಬ್ಯಾಂಕ್ಗಳು ಮತ್ತು ಆರ್‌ಬಿಐ ಜತೆಗೆ ಸಭೆ ನಡೆಸಲಾಯಿತು. ಸಾಲದಾತರಿಂದ ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಘೋಷಿಸಲಾದ ಯೋಜನೆಗಳನ್ನು ಸಹ ಇದರಲ್ಲಿ ಸೇರಿಸುವ ಮೂಲಕ ಯೋಜನೆಯನ್ನು ಮಾರ್ಪಡಿಸಲು ನಿರ್ಧರಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು.
25 ಸಾವಿರ ಕೋಟಿ ರೂ. ನಿಧಿಯ ಘೋಷಣೆಯು ಹೆಚ್ಚಿನ ಸಂಖ್ಯೆಯ ಗೃಹಬಳಕೆದಾರರು ಪ್ರಯೋಜನ ಪಡೆಯಲ್ಲಿದ್ದಾರೆ. ಗೃಹಬಳಕೆದಾರರ ದೀರ್ಘಾವಧಿಯ ಸಮಸ್ಯೆಗಳು ಬಗೆಹರಿಯಲಿವೆ ಎಂದು ಕ್ರೆಡೈ ಅಧ್ಯಕ್ಷ ಜಾಕ್ಸೆ ಶಾ ಅಭಿಪ್ರಾಯಪಟ್ಟರು.