ಬೆಂಗಳೂರು: ರಾಜ್ಯದಲ್ಲಿನ ಜನೌಷಧಿ ಅಂಗಡಿಗಳಿಗೆ ಔಷಧ ಪೂರೈಕೆಯನ್ನು ಇನ್ನಷ್ಟು ತ್ವರಿತಗೊಳಿಸಲು ಇನ್ನೂ ಎರಡು ವಿತರಣಾ ಕೇಂದ್ರಗಳಿಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಜನೌಷಧಿ ಅಂಗಡಿಕಾರರೊಂದಿಗೆ ಸಭೆ ನಡೆಸಿ ಅವರ ಕುಂದು-ಕೊರತೆ, ಬೇಡಿಕೆಗಳನ್ನು ಆಲಿಸಿದರು. ರಾಜ್ಯದಲ್ಲಿ ಜನೌಷಧಿ ಸರಬರಾಜು ಮತ್ತು ಮಾರಾಟದ ವ್ಯವಸ್ಥೆ ಬಲಪಡಿಸಲು ಹಾಗೂ ಜನೌಷಧಿ ಬಳಕೆ ಜನಪ್ರಿಯಗೊಳಿಸುವ ಬಗ್ಗೆ ಚರ್ಚಿಸಿದರು.
ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಜನೌಷಧಿ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ ಹುಬ್ಬಳ್ಳಿಯಲ್ಲಿ ಜನೌಷಧ ವಿತರಣಾ ಕೇಂದ್ರ ಆರಂಭಿಸಲು ಲೈಸನ್ಸ್ ನೀಡಲಾಗಿದ್ದು, ಅದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ವಿತರಣಾ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು.
ಶ್ರೀಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿ. ಬಿಜೆಪಿ ಸರ್ಕಾರ ಬಂದಾಗಿನಿಂದ ದೇಶಾದ್ಯಂತ 7,000ಕ್ಕಿಂತ ಹೆಚ್ಚು ಜನೌಷಧ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 849 ಜನೌಷಧಿ ಅಂಗಡಿಗಳನ್ನು ತೆರೆಯಲಾಗಿದ್ದು, ಈ ವರ್ಷ 125 ಕೋಟಿ ರೂಪಾಯಿ ಮಿಕ್ಕಿ ವಹಿವಾಟು ನಡೆಯಲಿದೆ. ನಾಡಿನ ಮೂಲೆಮೂಲೆಯಲ್ಲಿಯೂ ಜನೌಷಧ ಜನಪ್ರಿಯಗೊಳಿಸಬೇಕಿದೆ. ಸರ್ಕಾರಿ ಆಸ್ಪತ್ರೆ ಇರುವಲ್ಲೆಲ್ಲ ಜನೌಷಧಿ ಕೇಂದ್ರ ಇರಬೇಕು ಎಂಬುದು ನಮ್ಮ ಉದ್ದೇಶ. ಕನಿಷ್ಠ ಪಕ್ಷ ಸರ್ಕಾರಿ ವೈದ್ಯರಾದರೂ ಬ್ರಾಂಡೆಡ್ ಔಷಧಗಳ ಬದಲಿಗೆ ಜನೌಷಧಿಯನ್ನೇ ಬರೆದು ಕೊಡುವಂತಾಗಬೇಕು. ಇದರಿಂದ ಬಡವರಿಗೆ ದೊಡ್ಡಮಟ್ಟದಲ್ಲಿ ಹಣದ ಉಳಿತಾಯವಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರಗಳ ಸಹಕಾರ ಬಹುಮುಖ್ಯ. ಇವೆಲ್ಲ ವಿಷಯಗಳ ಬಗ್ಗೆ ರಾಜ್ಯ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: GSTನಷ್ಟ ಪರಿಹಾರ.. 16ನೇ ಕಂತಿನಡಿ ₹6,000 ಕೋಟಿ ಸಾಲ ಎತ್ತಿ ರಾಜ್ಯಗಳಿಗೆ ಬಿಡುಗಡೆ..
ಜನೌಷಧ ಅಂಗಡಿಗಳಲ್ಲಿ ಕೈಗೆಟುಕುವ ದರಗಳಲ್ಲಿ ಆಯುರ್ವೇಧ ಔಷಧಗಳನ್ನು ಲಭ್ಯವಾಗಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದೆ. ಆರಂಭಿಕವಾಗಿ ಸುಮಾರು 250 ನಮೂನೆಯ ಔಷಧಗಳನ್ನು ಗುರುತಿಸಲಾಗಿದೆ. ಆದರೆ ಜನೌಷಧಿ ಕೇಂದ್ರಗಳಲ್ಲಿ ಜಾನುವಾರು ಔಷಧಗಳನ್ನು ಕೂಡಾ ಪೂರೈಸಬೇಕೆಂಬ ಬೇಡಿಕೆ ಬಗ್ಗೆ ಮುಂಬರುವ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಕೋವಿಡ್ ವೇಳೆಯಲ್ಲಿಯೂ ಜನೌಷಧ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ದಾಖಲೆಯ ವಹಿವಾಟು ನಡೆಸಿವೆ. ಜನೌಷಧಿ ಅಂಗಡಿಕಾರರಾದ ತಾವು ಜೀವದ ಹಂಗುತೊರೆದು ಕಾರ್ಯನಿರ್ವಹಿಸಿದ್ದೀರಿ. ಸರ್ಕಾರವು ತಮ್ಮ ಸೇವೆಯನ್ನು ಗುರುತಿಸಿದೆ ಮತ್ತು ತಮ್ಮ ಬಗ್ಗೆ ಗೌರವ ಇಟ್ಟುಕೊಂಡಿದೆ ಎಂದು ಸಚಿವರು ಹೇಳಿದರು.
ಕೊರೊನಾದಿಂದ ಮೃತಪಟ್ಟ ಜನೌಷಧ ಅಂಗಡಿಕಾರರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಕೊರೊನಾ ಲಸಿಕಾ ಅಭಿಯಾನದಲ್ಲಿ ಜನೌಷಧ ಅಂಗಡಿಕಾರರನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ಜನೌಷಧ ಅಂಗಡಿಕಾರರ ಮೇಲೆ ದೌರ್ಜನ್ಯದ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಇದರಿಂದ ಸರ್ಕಾರ ರಕ್ಷಣೆ ನೀಡುವುದು ಸೇರಿ ಮುಂತಾದ ಬೇಡಿಕೆಗಳನ್ನು ಜನೌಷಧಿ ಅಂಗಡಿಕಾರರು ಮುಂದಿಟ್ಟರು.