ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ತೀವ್ರಗೊಂಡಿದ್ದರಿಂದ ದೆಹಲಿ ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ.
ಗಣರಾಜ್ಯೋತ್ಸವದಂದು ದೆಹಲಿಯ ಎನ್‌ಸಿಟಿಯಲ್ಲಿ ಸಿಂಗು, ಗಾಜಿಪುರ, ಟಿಕ್ರಿ, ಮುಕರ್ಬಾ ಚೌಕ್ ಮತ್ತು ನಂಗ್ಲೋಯಿ ಮತ್ತು ಅವುಗಳ ಪಕ್ಕದ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಟೆಲಿಕಾಂ ಇಲಾಖೆ, ಟೆಲಿಕಾಂ ಸೇವಾ ಪೂರೈಕೆದಾರರಿಗೆ ಆದೇಶಿಸಿದೆ. ಗಣರಾಜ್ಯೋತ್ಸವ ದಿನದಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.59ರವರೆಗೆ ಇಂಟರ್ನೆಟ್ ಸೇವೆ ಅಮಾನತುಗೊಂಡಿರುತ್ತದೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮತ್ತು ರೈತರ ಪ್ರತಿಭಟನಾ ಸ್ಥಳಗಳಿಗೆ ಹತ್ತಿರವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರವು ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳಡಿ ಆದೇಶಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.
ಇದನ್ನೂ ಓದಿ: ಹಿಂಸಾಚಾರದಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ, ಕೂಡ್ಲೇ ಕೃಷಿ ಕಾಯ್ದೆಗಳನ್ನ ರದ್ದು ಮಾಡಿ : ರಾಹುಲ್ ಆಗ್ರಹ
ಟೆಲಿಕಾಂ ಇಲಾಖೆಯ ವಕ್ತಾರರ ಪ್ರಕಾರ, ಇಂಟರ್ನೆಟ್ ಸ್ಥಗಿತಗೊಳಿಸುವ ಆದೇಶವನ್ನು ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆ ಆಡಳಿತ ಜಾರಿಗೆ ತಂದಿದೆ ಹೊರತು ಇಲಾಖೆಯಿಂದಲ್ಲ.
ರೈತರ ಪ್ರತಿಭಟನಾ ಸ್ಥಳಗಳಿಗೆ ಸಮೀಪದಲ್ಲಿ ವಾಸಿಸುವ ಜನರು ತಮ್ಮ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತದ ಬಗ್ಗೆ ಎಸ್‌ಎಂಎಸ್ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರದ ಸೂಚನೆಯಂತೆ ನಿಮ್ಮ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಸೇವೆಗಳನ್ನು ಬಳಸಲು ನಿಮಗೆ ಸಾಧ್ಯವಾಗುತ್ತಿಲ್ಲ. ನಾವು ಸರ್ಕಾರದಿಂದ ನಿರ್ದೇಶನಗಳನ್ನು ಪಡೆದ ನಂತರ ನೀವು ಇಂಟರ್ನೆಟ್ ಸೇವೆಗಳನ್ನು ಬಳಸಬಹುದು ಎಂದು ಎಸ್‌ಎಂಎಸ್ ಮೂಲಕ ಬಳಕೆದಾರರಿಗೆ ತಿಳಿಸಲಾಗಿದೆ.