ನವದೆಹಲಿ: ನಿಗದಿ ಪಡಿಸಿದ ಗುರಿಯನ್ನು ತಲುಪಲಾಗದ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅನ್ನು ಸರ್ಕಾರ ಒಂದು ತಿಂಗಳ ಕಾಲ ವಿಸ್ತರಿಸಿದೆ.
ಈ ಮೊದಲು ಈ ಯೋಜನೆಯನ್ನು ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಜಾರಿಗೊಳಿಸಲಾಗಿತ್ತು. ಆತ್ಮನಿರ್ಭರ ಭಾರತದ ಅಭಿಯಾನದ ಅಂಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇ ತಿಂಗಳಲ್ಲಿ ಈ ಯೋಜನೆ ಘೋಷಿಸಿದ್ದರು.
ಸುಮಾರು 3 ಲಕ್ಷ ಕೋಟಿಯಷ್ಟು ಸಾಲ ನೀಡಲು ಈ ಯೋಜನೆಯನ್ನು ರೂಪಿಸಿದ್ದು, ಈವರೆಗೆ ಈ ಗುರಿಯನ್ನು ತಲುಪಲಾಗದ ಹಿನ್ನೆಲೆಯಲ್ಲಿ ಮತ್ತೆ ಒಂದು ತಿಂಗಳ ಕಾಲ ಈ ಯೋಜನೆಯನ್ನು ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೊರೊನಾ ಕಾರಣಕ್ಕೆ ಸಂಕಷ್ಟಕ್ಕೆ ಒಳಗಾಗಿದ್ದ ಹಲವು ಕ್ಷೇತ್ರಗಳನ್ನು ಮೇಲೆತ್ತುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. 3 ಲಕ್ಷ ಕೋಟಿ ರೂಪಾಯಿಯನ್ನು ಇದಕ್ಕಾಗಿ ಮೀಸಲಿಡಲಾಗಿತ್ತು. ಆದರೆ ಅವಧಿ ಮುಗಿದರೂ ಗುರಿ ತಲುಪದ ಕಾರಣ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿದೆ.
ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ವೆಬ್ ಪೋರ್ಟಲ್ ಮಾಹಿತಿಯಂತೆ ಈವರಗೆ 60.67 ಲಕ್ಷ ಮಂದಿಗೆ 2.03 ಲಕ್ಷ ಕೋಟಿ ರೂಪಾಯಿ ಸಾಲ ಮಂಜೂರು ಮಾಡಲಾಗಿದ್ದು, ಇಲ್ಲಿಯವರೆಗೆ 1.48 ಕೋಟಿ ರೂಪಾಯಿ ವಿತರಣೆಯಾಗಿದೆ.