ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (ಪಿಎಂ ಕಿಸಾನ್) 7.60 ಕೋಟಿ ರೈತರಿಗೆ ₹ 36,000 ಕೋಟಿ ರೂ. ನೀಡಲಾಗಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2019ರ ನವೆಂಬರ್ 30ರವರೆಗೆ 7.60 ಕೋಟಿ ರೈತರಿಗೆ 36,000 ಕೋಟಿ ರೂ. ವಿತರಿಸಲಾಗಿದೆ ಎಂದರು.
₹ 75 ಸಾವಿರ ಕೋಟಿ ಮೊತ್ತದ ಪಿಎಂ ಕಿಸಾನ್ ಯೋಜನೆಯನ್ನು 2019-2020ರ ಮಧ್ಯಂತರ ಬಜೆಟ್‌ನಲ್ಲಿ ಜಾರಿಗೆ ತರಲಾಯಿತು. ಇದರನ್ವಯ 2 ಹೆಕ್ಟೇರ್‌ವರೆಗೆ ಕೃಷಿ ಭೂಮಿ ಹೊಂದಿರುವ 14.5 ಕೋಟಿ ಸಣ್ಣ ಕೃಷಿಕರನ್ನು ಯೋಜನೆಗೆ ಫಲಾನುಭವಿಗಳು ಎಂದು ಪರಿಗಣಿಸಲಾಗಿದೆ. 2019-20ರ ಆರ್ಥಿಕ ವರ್ಷದಲ್ಲಿ ಯೋಜನಾ ವೆಚ್ಚ ₹ 87,217.50 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.