ನವದೆಹಲಿ: ದೇಶದಲ್ಲಿ ಮೂಲ ಸೌಕರ್ಯಗಳ ಸೃಷ್ಟಿಗಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಹಣದ ಹರಿವನ್ನು ಹೆಚ್ಚಳ ಮಾಡಲು 6 ಸಾವಿರ ಕೋಟಿ ರೂಪಾಯಿ ಬಂಡವಾಳದ ಒಳಹರಿವಿಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವ್ಡೇಕರ್ ಹೇಳಿದ್ದಾರೆ.
ಅಸೀಮ್ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್ ಹಾಗೂ ಎನ್ಐಐಎಫ್ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್ ಒಕ್ಕೂಟವಿರುವ ರಾಷ್ಟ್ರೀಯ ಹೂಡಿಕೆ ಹಾಗೂ ಮೂಲ ಸೌಕರ್ಯ ನಿಧಿಯ ಅಡಿಯಲ್ಲಿ ಸಾಲ ನೀಡಲಾಗುತ್ತದೆ.
2025ರ ವೇಳೆಗೆ 1.10 ಲಕ್ಷ ಕೋಟಿ ಮೌಲ್ಯದ ಮೂಲ ಸೌಕರ್ಯ ಯೋಜನೆಗಳಿಗೆ ಹಣ ಹೂಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 6 ಸಾವಿರ ಕೋಟಿ ರೂಪಾಯಿಗೆ ಒಪ್ಪಿಗೆ ನೀಡಿರುವುದರಿಂದ ಯೋಜನೆಗಳಿಗೆ ಚಾಲನೆ ಸಿಗಲಿದೆ.
ಖಾಸಗಿ ಕಂಪನಿಗಳು ಮೂಲ ಸೌಕರ್ಯ ಅಭಿವೃದ್ಧಿಗೆ ಸಾಲದ ಅವಶ್ಯಕತೆ ಇದ್ದರೆ ತಮಗಿರುವ ಷೇರುಗಳ ಆಧಾರದಲ್ಲಿ ರಾಷ್ಟ್ರೀಯ ಹೂಡಿಕೆ ಹಾಗೂ ಮೂಲ ಸೌಕರ್ಯ ನಿಧಿಯ ಮೂಲಕ ಸಾಲ ಪಡೆಯಬಹುದಾಗಿದೆ.
ಈಗ ಸದ್ಯಕ್ಕೆ 6 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿದ್ದು, ಇದೇ ಆರ್ಥಿಕ ವರ್ಷದಲ್ಲಿ ಮತ್ತೆ 2,400 ಕೋಟಿ ರೂಪಾಯಿ ಘೋಷಣೆ ಮಾಡಲಾಗುತ್ತದೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಎಲ್ವಿಬಿಯೊಂದಿಗೆ ಡಿಬಿಐಎಲ್ ವಿಲೀನ
ಇತ್ತೀಚಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ನ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ನಿರ್ಬಂಧಗಳನ್ನು ಹೇರಿದ್ದು, ಗ್ರಾಹಕರು ಬ್ಯಾಂಕ್ನಿಂದ ಹಣ ಪಡೆಯುವುದರ ಮೇಲೆ ಮಿತಿ ಹೇರಿತ್ತು.
ಈಗ ಡೆವಲಪ್‌ಮೆಂಟ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ (ಡಿಬಿಐಎಲ್)ನೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನಗೊಳಿಸಲು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದಾರೆ.
ಈ ವಿಲೀನದ ನಂತರ ಗ್ರಾಹಕರು ಬ್ಯಾಂಕ್ನಲ್ಲಿ ಹಣ ಜಮಾವಣೆ ಮಾಡಲು ಅಥವಾ ಹಣ ಹಿಂಪಡೆಯಲು ಯಾವುದೇ ರೀತಿಯ ಮಿತಿ ಇರುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.