ನವದೆಹಲಿ: ಉದ್ಯೋಗಿಗಳ ರಾಜ್ಯ ವಿಮಾ ಪ್ರಾಧಿಕಾರ(ESIC)ದ ಆರೋಗ್ಯ ವಿಮಾ ಯೋಜನೆಗಳಿಗೆ ಉದ್ಯೋಗಿಗಳು ಹಾಗೂ ಉದ್ಯೋಗದಾತರು ನೀಡುತ್ತಿದ್ದ ಮೊತ್ತವನ್ನು ಶೇ 4ರಷ್ಟಕ್ಕೆ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಈವರೆಗೆ ಆರೋಗ್ಯ ವಿಮಾ ಯೋಜನೆಗಾಗಿ ಉದ್ಯೋಗಿಯ ಸಂಬಳದ ಶೇ 6.5ರಷ್ಟು ಮೊತ್ತವನ್ನು ಉದ್ಯೋಗಿಗಳು ಹಾಗೂ ಉದ್ಯೋಗದಾತರು ಪಾವತಿಸುತ್ತಿದ್ದರು. ಇದೀಗ ಶೇ. 4ಕ್ಕೆ ಇಳಿಕೆ ಮಾಡಿದ್ದರಿಂದ ವಿವಿಧ ಸಂಸ್ಥೆಗಳಲ್ಲಿ ವಾರ್ಷಿಕ 5 ಸಾವಿರ ಕೋಟಿ ರೂ ಉಳಿತಾಯವಾಗಲಿದೆ ಎನ್ನಲಾಗ್ತಿದೆ.
ಪರಿಷ್ಕೃತ ನಿಯಮ ಜುಲೈ 1ರಿಂದಲೇ ಜಾರಿಗೊಳ್ಳಲಿದ್ದು, 3.6 ಕೋಟಿ ಉದ್ಯೋಗಿಗಳು ಹಾಗೂ 12.85 ಲಕ್ಷ ಉದ್ಯೋಗದಾತರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಹೇಳಿದೆ.
ಹೊಸ ನಿಯಮದಿಂದ ಉದ್ಯೋಗದಾತರ ಶೇ. 4.75ರಷ್ಟು ಮೊತ್ತದ ಬದಲಿಗೆ ಶೇ. 3,25ರಷ್ಟು ಮೊತ್ತವನ್ನು ಹಾಗೂ ಉದ್ಯೋಗಿಗಳು ಶೇ.1.75ರಷ್ಟು ಮೊತ್ತದ ಬದಲಿಗೆ ಶೇ. 0.75ರಷ್ಟು ಮೊತ್ತವನ್ನಷ್ಟೇ ಪಾವತಿಸಬೇಕಿದೆ. 2018-19ನೇ ಸಾಲಿನಲ್ಲಿ ಉದ್ಯೋಗದಾತರು 3.6 ಕೋಟಿ ಹಾಗೂ ಉದ್ಯೋಗಿಗಳು 22,279 ಕೋಟಿ ರೂಗಳನ್ನು ಇಎಸ್ಐಗಾಗಿ ಪಾವತಿಸಿದ್ದರು.
ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ 1984ರಂತೆ ಉದ್ಯೋಗಿಗಳಿಗೆ ವೈದ್ಯಕೀಯ, ಅಂಗವಿಕಲತೆ, ಹೆರಿಗೆ, ಮತ್ತಿತರ ಸೇವೆಗಳನ್ನು ಒದಗಿಸಲಾಗುತ್ತಿದೆ. ಹೊಸ ನಿಯಮದಿಂದ ಉದ್ಯೋಗಿಗಳು ಹಾಗೂ ಉದ್ಯೋಗದಾತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಇಲಾಖೆ ಹೇಳಿದೆ.