ನವದೆಹಲಿ: ಕುಸಿಯುತ್ತಿರುವ ಆರ್ಥಿಕತೆಗೆ ಪರಿಹಾರ ನೀಡುವ ಹಾಗೂ ತೆರಿಗೆ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ವಲಯ ಮಟ್ಟದ ಕುಂದು- ಕೊರತೆ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಆಯಾ ರಾಜ್ಯಗಳ ಪ್ರಧಾನ ಮುಖ್ಯ ಆಯುಕ್ತರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೀತಿ ವಿಭಾಗ ನಿರ್ದೇಶಿಸಿದೆ.
ಪ್ರಧಾನ ಮುಖ್ಯ ಆಯುಕ್ತರು ಮತ್ತು ಮುಖ್ಯ ಆಯುಕ್ತರು ಕ್ರಮವಾಗಿ ಸಮಿತಿಯ ಅಧ್ಯಕ್ಷ ಹಾಗೂ ಸಹ ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯು ಸ್ಥಳೀಯ ಮಟ್ಟದಲ್ಲಿ ತೆರಿಗೆ ಸಂಗ್ರಹದಲ್ಲಾಗುತ್ತಿರುವ ಸಮಸ್ಯೆಗೆ ಪರಿಹಾರ ನೀಡುವ ಜೊತೆಗೆ ಜಿಡಿಪಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ನೆರವಾಗಲಿದೆ.
ವಿವಿಧ ವ್ಯಾಪಾರ ಸಂಘಟನೆ, ಒಕ್ಕೂಟಗಳ ಪ್ರತಿನಿಧಿಗಳು, ಚಾರ್ಟರ್ಡ್ ಅಕೌಂಟೆಂಟ್ಸ್, ತೆರಿಗೆಗೆ ಸಂಬಂಧಿಸಿದ ವಕೀಲರು, ಐಟಿ ಕುಂದುಕೊರತೆ ಪರಿಹಾರ ಸಮಿತಿ (ಐಟಿಜಿಆರ್‌ಸಿ) ನೋಡಲ್ ಅಧಿಕಾರಿಗಳು ಮತ್ತು ಅದಕ್ಕೆ ಸಂಬಂಧಿಸಿದ ವಲಯ ಅಥವಾ ರಾಜ್ಯವನ್ನು ನಿರ್ವಹಿಸುವ ಜಿಎಸ್‌ಟಿ ಪ್ರತಿನಿಧಿಗಳು ಸೇರಿದಂತೆ ತಜ್ಞರನ್ನೊಳಗೊಂಡ ಪ್ರಮುಖ ಸಂಘಗಳನ್ನು ಈ ಪರಿಹಾರ ಸಮಿತಿ ಒಳಗೊಳ್ಳಲಿದೆ.
ಕುಂದು-ಕೊರತೆ ಪರಿಹಾರ ಸಮಿತಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ. ಈ ಸಮಿತಿಯಲ್ಲಿರುವ ಸದಸ್ಯರು ಸತತ ಮೂರು ಸಭೆಗಳಿಗೆ ಗೈರಾದರೆ, ಅಂತಹವರನ್ನು ಸಮಿತಿಯಿಂದ ವಜಾಗೊಳಿಸಲಾಗುತ್ತದೆ. ಬಳಿಕ ಆ ಸ್ಥಾನಕ್ಕೆ ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಕಳೆದ ವಾರ ನಡೆದ 38ನೇ ಜಿಎಸ್‌ಟಿ ಸಮಿತಿ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ನಿರ್ಧಾರ ಕೈಗೊಂಡಿದ್ದರು.