ಮುಂಬೈ: ಮುಂದಿನ ಕ್ಯಾಲೆಂಡರ್ ವರ್ಷದಲ್ಲಿ ಜಾಗತಿಕ ಭೌಗೋಳಿಕ ರಾಜಕೀಯ ನಡೆಗಳು, ಆರ್ಥಿಕ ಏರಿಳಿತಗಳು ಮತ್ತು ಕರೆನ್ಸಿಗಳ ಚಂಚಲತೆಯು ಹಳದಿ ಲೋಹದ ಮೇಲೆ ನೇರ ಪರಿಣಾಮ ಬೀರಲಿದ್ದು, ಪ್ರತಿ 10 ಗ್ರಾಂ. ಚಿನ್ನದ ದರ 45,000 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಸರ್ಕಾರದ ವಿವಿಧ ನೀತಿಗಳ ಹಾಗೂ ಗಗನಕ್ಕೇರಿದ ಸ್ಟಾಕ್ ಮಾರುಕಟ್ಟೆಯ ತತ್ಪರಿಣಾಮ ಚಿನ್ನವು 2019ರಲ್ಲಿ ಸಾರ್ವಕಾಲಿದ ಗರಿಷ್ಠ ದರ ಏರಿಕೆ ದಾಖಲಿಸಿತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ಸಾವಿರ ರೂ. ಗಡಿದಾಟಿತು. 'ಆರ್‌ಬಿಐ ಸೇರಿದಂತೆ ವಿಶ್ವದ 14 ಕೇಂದ್ರೀಯ ಬ್ಯಾಂಕ್ಗಳು ತಮ್ಮ ಚಿನ್ನದ ಮೀಸಲು ಪ್ರಮಾಣವನ್ನು ಹೆಚ್ಚಿಸಿವೆ' ಎಂಬುದನ್ನು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ಅಂಕಿ ಅಂಶಗಳು ಮೂಲಕ ಸಾದರಪಡಿಸಿದೆ.
'ನಾವು 2020ರತ್ತ ದೃಷ್ಟಿ ನೆಟ್ಟಿದ್ದೇವೆ. ಹೂಡಿಕೆದಾರರು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಕಾಳಜಿಯನ್ನು ಎದುರಿಸಬೇಕಾಗುತ್ತದೆ. ಈ ಮೊದಲೇ ಅಸ್ತಿತ್ವದಲ್ಲಿರುವ ಅನೇಕ ಪರಿಹಾರಗಳು ಹಿಂದಕ್ಕೆ ಸರಿಯಲಿವೆ. ವಿಶ್ವಾದ್ಯಂತ ಕಡಿಮೆ ಮಟ್ಟದ ಬಡ್ಡಿದರಗಳು ಷೇರುಗಳ ಬೆಲೆಗಳನ್ನು ಹೆಚ್ಚಿಸಲು ನೆರವಾಗಲಿವೆ. ಚಿನ್ನದಂತಹ ಸುರಕ್ಷಿತಾ ಸ್ವತ್ತುಗಳ ಮೇಲೆ ಹೂಡಿಕೆಯು ಅಧಿಕವಾಗಲಿದೆ' ಎಂದು ಕಾಮೆಟ್ರೆಂಡ್ಜ್ ರಿಸರ್ಚ್ ನಿರ್ದೇಶಕ ಜ್ಞಾನಶೇಖರ್ ತ್ಯಾಗರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ - ಚೀನಾ ನಡುವಿನ ವಾಣಿಜ್ಯ ಸಮರದ ಪ್ರಕ್ಷುಬ್ಧತೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ರಾಜಕೀಯ ಘರ್ಷಣೆಗಳು, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಸಮಸ್ಯೆಗಳು ಹಾಗೂ 2020ರ ಅಂತ್ಯದ ವೇಳೆಗೆ ಜರುಗುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಏನಾಗಲಿದೆ ಎಂಬುದನ್ನು ಇಡೀ ವಿಶ್ವವೇ ಎದುರುನೋಡುತ್ತಿದೆ.
ಮಧ್ಯಮ ಅವಧಿಯ ಎಂಸಿಎಕ್ಸ್‌ನಲ್ಲಿ ಪ್ರತಿ 10 ಗ್ರಾಂ. ಚಿನ್ನವು 41,000- 41,500 ರೂ. ಮಟ್ಟದಲ್ಲಿ ಇರಬಹುದು. ಜಾಗತಿಕ ಮಟ್ಟದಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದರೆ ಈ ಮಟ್ಟವು 44,500ರಿಂದ 45,000 ರೂ.ಗೆ ಏರಿಕೆಯಾಗಬಹುದು ಎಂದು ತ್ಯಾಗರಾಜನ್ ವಿಶ್ಲೇಷಿಸಿದ್ದಾರೆ.
ವಿಶ್ವ ಗೋಲ್ಡ್ ಕೌನ್ಸಿಲ್ ವ್ಯವಸ್ಥಾಪಕ ನಿರ್ದೇಶಕ ಪಿ. ಆರ್. ಸೋಮಸುಂದರಂ ಮಾತನಾಡಿ, ಭಾರತೀಯ ರೂಪಾಯಿ ಸೇರಿದಂತೆ ಬಹುತೇಕ ಎಲ್ಲ ಮಾರುಕಟ್ಟೆಗಳಲ್ಲಿ ಸ್ಥಳೀಯ ಕರೆನ್ಸಿ ದರಗಳು ತಮ್ಮ ಹಿಂದಿನ ಗರಿಷ್ಠ ಮಟ್ಟದ ವಹಿವಾಟಿನ ದಾಖಲೆಯನ್ನು ಅಳಿಸಿ ಹಾಕಿವೆ. ಇದು ಮಾರುಕಟ್ಟೆಗಳಲ್ಲಿ ಗ್ರಾಹಕರ ಬೇಡಿಕೆಯನ್ನು ಸ್ಥಿರವಾಗಿರಸಲು ಮುಖ್ಯ ಕಾರಣವಾಗಿದೆ ಎಂದರು.
ಮೂರನೇ ತ್ರೈಮಾಸಿಕದಲ್ಲಿ ಭಾರತೀಯರ ಬೇಡಿಕೆಯು ಗಮನಾರ್ಹ ಮಟ್ಟದಲ್ಲಿ ಇಳಿಕೆಯಾಯಿತು. 4ನೇ ತ್ರೈಮಾಸಿಕದಲ್ಲಿ ಸಾಂಪ್ರದಾಯಿಕ ವಿವಾಹ ಮತ್ತು ಹಬ್ಬದ ಸೀಜನ್ನಲ್ಲಿ ಬೇಡಿಕೆಯು ಪುನರುಜ್ಜೀವನ ಕಂಡರೂ ವರ್ಷದ ಒಟ್ಟಾರೆ ಬೇಡಿಕೆ ನಿರೀಕ್ಷೆಯು 700 ರಿಂದ 750 ಟನ್ಗಳ ಕೆಳ ಮಟ್ಟದಲ್ಲಿ ಅಂತ್ಯವಾಯಿತು. ಅಮೆರಿಕ ಮತ್ತು ಯುರೋಪ್ನಲ್ಲಿ ಇಟಿಎಫ್ (ಎಕ್ಸ್ಚೇಂಜ್ ಟ್ರೇಡೆಡ್ ಫಂಡ್) ಬೇಡಿಕೆ ಮತ್ತು ಕೇಂದ್ರೀಯ ಬ್ಯಾಂಕ್ಗಳ ವ್ಯಾಪಕ ಚಿನ್ನ ಖರೀದಿಯು ಮುಂದುವರಿದಿತ್ತು ಎಂದು ಹೇಳಿದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2019ರಲ್ಲಿ ಚಿನ್ನ ಖರೀದಿಗೆ ಹೆಚ್ಚಿನ ಆಸಕ್ತಿ ತಳಿಯಿತು. ಅದರ ಮೀಸಲು ಪ್ರಮಾಣವನ್ನು 60 ಟನ್‌ಗೂ ಅಧಿಕ ಮಟ್ಟದಲ್ಲಿ ಕಾಯ್ದಿರಿಸಿಕೊಂಡಿತು. ಇಲ್ಲಿಯವರೆಗೆ ಚಿನ್ನ ಖರೀದಿಗೆ ಅತಿಹೆಚ್ಚು ಗಮನಹರಿಸುತ್ತಿದ್ದ ಚೀನಾ ಮತ್ತು ರಷ್ಯಾ ಸಾಲಿಗೆ ಭಾರತ, ಟರ್ಕಿ, ಪೋಲೆಂಡ್ ಮತ್ತು ಕಝಾಕಿಸ್ತಾನ್ ಸಹ ಸೇರಿಕೊಂಡಿವೆ ಎಂದು ವಿವರಿಸಿದರು. ಈ ಎಲ್ಲ ಬೆಳವಣಿಗೆಗಳು ಚಿನ್ನದ ದರ ಹೆಚ್ಚಳಕ್ಕೆ ಮುನ್ನುಡಿ ಆಗಲಿವೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.