ಪಣಜಿ: ಕರಾವಳಿ ಪ್ರವಾಸೋದ್ಯಮ ಮತ್ತು ಗಣಿಗಾರಿಕೆಗೆ ಹೆಸರುವಾಸಿ ಆಗಿರುವ ಗೋವಾ, ಇಲ್ಲಿನ ಸರ್ಕಾರ ತನ್ನ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕೆ ಮತ್ತೊಂದು ಸೇವೆಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ.
ಸಮನಾಂತರ ಅಭಿವೃದ್ಧಿಯನ್ನು ಖಚಿತಪಡಿಸಿ ಕರಾವಳಿ ಮತ್ತು ಒಳನಾಡಿನ ಅಸಮಾನತೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಬೀಚ್ ಪ್ರವಾಸೋದ್ಯಮದ ಜೊತೆಗೆ ವೈದ್ಯಕೀಯ ಪ್ರವಾಸೋದ್ಯಮಕ್ಕೂ ಹೆಚ್ಚಿನ ಗಮನ ಹರಿಸಲಿದೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಸಹಕಾರಿ ಆಗುವಂತಹ ಒಳನಾಡು ಪ್ರದೇಶಗಳು ಸಾಕಷ್ಟಿವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಕರಾವಳಿ ಪ್ರವಾಸೋದ್ಯಮ ಮತ್ತು ಗಣಿಗಾರಿಕೆಗೆ ಗೋವಾ ಹೆಸರುವಾಸಿಯಾಗಿದೆ. ಆದರೆ, ಗಣಿಗಾರಿಕೆಯನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ನಿಷೇಧಿಸಿದೆ. ಒಳನಾಡಿನ ಪ್ರವಾಸೋದ್ಯಮದ ಭವಿಷ್ಯ ಸುಧಾರಿಸುವತ್ತ ನಾವು ಗಮನ ಹರಿಸುತ್ತಿದ್ದೇವೆ. ಇಲ್ಲಿಯವರೆಗೆ ಗೋವಾ ಸೂರ್ಯಾಸ್ತಮ, ಮರಳು ಮತ್ತು ಬೀಚ್ ಪ್ರವಾಸೋದ್ಯಮದಲ್ಲಿ ಹೆಗ್ಗಳಿಕೆ ಪಡೆದಿತ್ತು ಎಂದರು.
ಈ ಪ್ರವಾಸಿ ಕ್ಷೇತ್ರಗಳ ಜೊತೆಗೆ ನಮ್ಮಲ್ಲಿ ಅನೇಕ ಆಸಕ್ತಿದಾಯಕ ದೇವಾಲಯಗಳು, ಚರ್ಚ್ಗಳು ಮತ್ತು ಮಸಾಲ ಪದಾರ್ಥ ಕೇಂದ್ರಗಳಿವೆ. ಅವುಗಳು ಪ್ರವಾಸೋದ್ಯಮ ಸಾಮರ್ಥ್ಯವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿವೆ. ವೈದ್ಯಕೀಯ ಪ್ರವಾಸೋದ್ಯಮ ಉತ್ತೇಜಿಸಲು ಕೆಲವು ಕಾನೂನುಗಳಿಗೆ ತಿದ್ದುಪಡಿ ಮಾಡಬೇಕಾಗಿದೆ. ಅವುಗಳನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಸಾವಂತ್ ಹೇಳಿದರು.