ಜಿನೀವಾ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ವ್ಯಾಪಾರದ ಬೆಳವಣಿಗೆಯು 2020ರಲ್ಲಿ ಮೂರನೇ ಒಂದು ಭಾಗದಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ವಿಶ್ವ ವಾಣಿಜ್ಯ ಸಂಸ್ಥೆ ಹೇಳಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ಸಾಮಾನ್ಯ ಆರ್ಥಿಕ ಚಟುವಟಿಕೆ ಮತ್ತು ಪ್ರಪಂಚದಾದ್ಯಂತದ ಜನ ಜೀವನವನ್ನು ಅಡ್ಡಿಪಡಿಸುವುದರಿಂದ 2020ರಲ್ಲಿ ವಿಶ್ವ ವ್ಯಾಪಾರವು 13 ಪ್ರತಿಶತದಿಂದ 32 ಪ್ರತಿಶತದಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಡಬ್ಲ್ಯುಟಿಒ ಪ್ರಕಟಣೆಯಲ್ಲಿ ತಿಳಿಸಿದೆ.
ಭೀಕರ ಆರೋಗ್ಯ ಬಿಕ್ಕಟ್ಟಿನಿಂದ ವ್ಯಾಪಾರವು ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ವ್ಯಾಪಕವಾದ ಸಾಧ್ಯತೆಗಳಿವೆ ಎಂದು ಹೇಳಿದೆ.
ಆರ್ಥಿಕ ಕುಸಿತವು ನನ್ನ ಜೀವಿತಾವಧಿಯ ಅತಿದೊಡ್ಡ ಆರ್ಥಿಕ ಹಿಂಜರಿತ ಅಥವಾ ಕುಸಿತವಾಗಬಹುದು. ಕೊರೊನಾ ವೈರಸ್ ಹಬ್ಬುವ ಮೊದಲು ಅಂದರೆ 2019ರಲ್ಲಿ ವ್ಯಾಪಾರವು ಮಂದಗತಿಯಲ್ಲಿ ಸಾಗುತ್ತಿತ್ತು. ಈಗ ಅದರ ಮೇಲೆ ಮತ್ತಷ್ಟು ಪರಣಾಮ ಬೀರುತ್ತಿದೆ ಎಂದು ಡಬ್ಲ್ಯುಟಿಒ ಮುಖ್ಯಸ್ಥ ರಾಬರ್ಟೊ ಅಜೆವೆಡೊ ಎಚ್ಚರಿಸಿದ್ದಾರೆ.
ಪ್ರಸ್ತುತದಲ್ಲಿನ ವ್ಯಾಪಾರ ಉದ್ವಿಗ್ನತೆ ಮತ್ತು ಬ್ರೆಕ್ಸಿಟ್‌ನ ಅನಿಶ್ಚಿತತೆಗಳಿಂದ ಜಾಗತಿಕ ಆರ್ಥಿಕತೆ ಬಳಲುತ್ತಿದೆ. ಈ ವರ್ಷ ಬಹುತೇಕ ಎಲ್ಲ ರಾಷ್ಟ್ರಗಳ ವ್ಯಾಪಾರದ ಪ್ರಮಾಣದಲ್ಲಿ ಎರಡು ಅಂಕಿಗೆ ಕುಸಿತ ಕಾಣುವ ನಿರೀಕ್ಷೆಯಿದೆ ಎಂದು ಡಬ್ಲ್ಯುಟಿಒ ಅಂದಾಜಿಸಿದೆ.