ಮ್ಯಾಡ್ರಿಡ್: ಕೊರೊನಾ ವೈರಸ್ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಜಾಗತಿಕ ಆರ್ಥಿಕ ಚೇತರಿಕೆಗೆ ಐದು ವರ್ಷ ಬೇಕಾಗಬಹುದು ಎಂದು ವಿಶ್ವ ಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞ ಕಾರ್ಮೆನ್ ರೀನ್ಹಾರ್ಟ್ ಹೇಳಿದ್ದಾರೆ.
ಲಾಕ್‌ಡೌನ್‌ಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಬಂಧ ತೆಗೆದುಹಾಕುವುದರಿಂದ ಬಹುಶಃ ಶೀಘ್ರವಾಗಿ ಆರ್ಥಿಕತೆ ಮರುಕಳಿಸುವ ಸಾಧ್ಯತೆ ಇದೆ. ಆದರೆ, ಪೂರ್ಣ ಚೇತರಿಕೆಗೆ ಐದು ವರ್ಷಗಳು ತೆಗೆದುಕೊಳ್ಳುತ್ತದೆ ಎಂದರು.
ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಹಿಂಜರಿತವು ಇತರ ದೇಶಗಳಿಗಿಂತ ಕೆಲವು ದೇಶಗಳಲ್ಲಿ ಹೆಚ್ಚು ಕಾಲ ಉಳಿದು ಅಸಮಾನತೆಗಳನ್ನು ಉಲ್ಬಣಗೊಳಿಸುತ್ತದೆ. ಶ್ರೀಮಂತ ರಾಷ್ಟ್ರಗಳಲ್ಲಿನ ಬಿಕ್ಕಟ್ಟಿನಿಂದ ಬಡವರಿಗೆ ಹೆಚ್ಚು ತೊಂದರೆ ಆಗುತ್ತದೆ. ಬಡ ದೇಶಗಳು ಶ್ರೀಮಂತ ರಾಷ್ಟ್ರಗಳಿಗಿಂತ ಹೆಚ್ಚು ತೊಂದರೆಗೊಳಗಾಗುತ್ತವೆ ಎಂದು ರೀನ್‌ಹಾರ್ಟ್ ಎಚ್ಚರಿಸಿದ್ದಾರೆ.
ಇಪ್ಪತ್ತು ವರ್ಷಗಳಲ್ಲಿ ಮೊದಲ ಬಾರಿಗೆ, ಬಿಕ್ಕಟ್ಟಿನ ಬಳಿಕ ಜಾಗತಿಕ ಬಡತನದ ಪ್ರಮಾಣ ಏರಿಕೆಯಾಗಲಿದೆ ಎಂದು ಹೇಳಿದರು.