ನವದೆಹಲಿ: ಹೊಸ ಹಣಕಾಸು ವರ್ಷದ (2019-20) ಆರಂಭದಿಂದಲೂ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ (ಎಫ್ಡಿಐ) ಹರಿವು ಹೆಚ್ಚಾಗುತ್ತಿದೆ. ಇದರಿಂದ ದೇಶದ ಮಾರುಕಟ್ಟೆಯಲ್ಲಿ ಸಕರಾತ್ಮಕ ವಹಿವಾಟು ಮುಂದುವರಿದಿದೆ.
ಅಂಕಿಅಂಶಗಳ ಪ್ರಕಾರ, ವಿದೇಶಿ ಹೂಡಿಕೆದಾರರು ಏಪ್ರಿಲ್ 1ರಿಂದ 12ರವರೆಗೆ ಈಕ್ವಿಟ್ ಮಾರುಕಟ್ಟೆಯಲ್ಲಿ ₹ 13,308.78 ಕೋಟಿ ಹೂಡಿಕೆ ಮಾಡಿದ್ದಾರೆ. ಇದೇ ಅವಧಿಯಲ್ಲಿ ಕ್ರೆಡಿಟ್ ವಲಯದಿಂದ ₹ 2,212.08 ಕೋಟಿ ಹಿಂತೆಗೆದುಕೊಂಡಿದ್ದು, ಒಟ್ಟು ನಿವ್ವಳ ಮೊತ್ತ ₹ 11,096.70 ಕೋಟಿ ಆಗಿದೆ.
ಜಾಗತಿಕ ಹಾಗೂ ದೇಶಿ ಅಂಶಗಳಿಂದ ಪ್ರಭಾವಿತರಾಗಿರುವ ವಿದೇಶಿ ಹೂಡಿಕೆದಾರರು ಭಾರತೀಯ ಬಂಡವಾಳ ಮಾರುಕಟ್ಟೆ ಮೇಲೆ ₹ 11,096 ಕೋಟಿ ತೊಡಗಿಸಿದ್ದಾರೆ. ಈ ಹಿಂದಿನ ಎರಡು ತಿಂಗಳು ಸಹ ವಿದೇಶಿ ಹೂಡಿಕೆ ಏರುಗತಿಯಲ್ಲಿ ಸಾಗುತ್ತಿದ್ದು, ಮಾರ್ಚ್ನಲ್ಲಿ ₹ 45,981 ಕೋಟಿ ಹರಿದು ಬಂದಿತ್ತು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರ್ಥಿಕಾಭಿವೃದ್ದಿ ಹಾಗೂ ವಿಶ್ವದ ಆರ್ಥಿಕ ಕುಸಿತದ ಭೀತಿಯು ಭಾರತೀಯ ಮಾರುಕಟ್ಟೆಯ ಮೇಲೆ ವಿದೇಶಿ ಬಂಡವಾಳ ಹೂಡಿಕೆದಾರರ ನಿರೀಕ್ಷೆ ಹೆಚ್ಚಿಸಿದೆ. ಫೆಬ್ರವರಿಯಲ್ಲಿ ಧನಾತ್ಮಕ ಚಟುವಟಿಕೆಗಳು ಮುಂದುವರೆದಿವೆ. ಸಾರ್ವತ್ರಿಕ ಚುನಾವಣೆ ಬಳಿಕ ಮತ್ತೆ ಸ್ಥಿರ ಸರ್ಕಾರ ಬರಲಿದೆ ಎಂಬುದು ಹೂಡಿಕೆದಾರರ ವಿಶ್ವಾಸ ಎಂದು ಸಿಒಒ ಮುಖ್ಯಸ್ಥ ಹರ್ಷ ಜೈನ್ ಅಭಿಪ್ರಾಯಪಟ್ಟಿದ್ದಾರೆ.