ನವದೆಹಲಿ: ಮೂಲಸೌಕರ್ಯ ಕ್ಷೇತ್ರದಲ್ಲಿ ಸರ್ಕಾರದ ಖರ್ಚು ಹೆಚ್ಚಳದ ಭಾಗವಾಗಿ ಮುಂದಿನ ಐದು ವರ್ಷಗಳಲ್ಲಿ 102 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು 100 ಟ್ರಿಲಿಯನ್ ರೂ. ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡುವ ಹೇಳಿಕೆಯ ಬಗ್ಗೆಯೂ ಪ್ರಸ್ತಾಪಿಸಿದರು. 'ನಾಲ್ಕು ತಿಂಗಳ ಅಲ್ಪಾವಧಿಯಲ್ಲಿ 70 ಸ್ಟೇಕ್ ಹೋಲ್ಡರ್ ನಡುವೆ ಸಮಾಲೋಚನೆ ನಡೆಸಲಾಗಿದೆ. 102 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಗುರುತಿಸಲಾಗಿದೆ ಎಂದರು.
ಕಳೆದ ಆರು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು 51 ಟ್ರಿಲಿಯನ್ ರೂ.ಯಷ್ಟು ಖರ್ಚು ಮಾಡಿವೆ. ಕೇಂದ್ರ ಮತ್ತು ರಾಜ್ಯಗಳು ತಲಾ ಶೇ. 39ರಷ್ಟು ಯೋಜನೆಗಳು ಮತ್ತು ಖಾಸಗಿ ವಲಯದ ಶೇ. 22ರಷ್ಟು ಯೋಜನೆಗಳನ್ನೊಳಗೊಂಡಿವೆ ಎಂದು ವಿವರಿಸಿದರು.
ವಿದ್ಯುತ್, ರೈಲ್ವೆ, ನಗರಾಭಿವೃದ್ಧಿ, ನೀರಾವರಿ, ಮೊಬೈಲಿಟಿ, ಶಿಕ್ಷಣ ಮತ್ತು ಆರೋಗ್ಯದಂತಹ ಮುಂತಾದ ಕ್ಷೇತ್ರಗಳಿಗೆ ಗುರುತಿಸಲಾದ ಯೋಜನೆಗಳಿವೆ. ಸುಮಾರು 25 ಟ್ರಿಲಿಯನ್ ರೂ. ಇಂಧನ ಯೋಜನೆಗಳನ್ನು ಪೂರೈಸಲಾಗಿದೆ. 20 ಟ್ರಿಲಿಯನ್ ರೂ. ರಸ್ತೆ ಮತ್ತು ಸುಮಾರು 14 ಟ್ರಿಲಿಯನ್ ರೂ. ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸೀತಾರಾಮನ್ ಅವರು ಹೇಳಿದರು.
ನವೀಕರಿಸಬಹುದಾದ ವಲಯ, ರೈಲ್ವೆ, ನಗರಾಭಿವೃದ್ಧಿ, ನೀರಾವರಿ, ಚಲನಶೀಲತೆ, ಶಿಕ್ಷಣ, ಆರೋಗ್ಯ, ನೀರು ಮತ್ತು ಡಿಜಿಟಲ್ ಸೇರಿ ಇತರೆ ಮುಖ್ಯ ಯೋಜನೆಗಳಾಗಿವೆ. 2025ರ ವೇಳೆಗೆ 102 ಟ್ರಿಲಿಯನ್ ರೂಪಾಯಿಯಷ್ಟು ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳಡಿ ವಿನಿಯೋಗಿಸಲಾಗುತ್ತದೆ. ಇದು ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ತಲುಪಲು ನೆರವಾಗಲಿದೆ ಎಂದರು.