ನವದೆಹಲಿ: ಕೊರೊನಾ ಸಾಂಕ್ರಾಮಿಕ ತಂದಿಟ್ಟಿರುವ ಕೋಲಾಹಲದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಆರ್ಥಿಕ ಉತ್ತೇಜನ ಪ್ಯಾಕೇಜ್ ಅನಾವರಣಗೊಳಿಸುವ ಮೂಲಕ ದೇಸೀ ವಲಯಕ್ಕೆ ದೊಡ್ಡ ಪ್ರಮಾಣದ ಸಾಮಾಜಿಕ ಅನುಕೂಲತೆಗಳನ್ನು ಒದಗಿಸುವ ಭರವಸೆ ನೀಡಿದ್ದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರ್ಥಿಕತೆಗೆ ಉತ್ತೇಜನ ನೀಡುವ 20 ಲಕ್ಷ ಕೋಟಿ ರೂ. ಪ್ಯಾಕೇಜನ್ನು ವಿವಿಧ ವಲಯಗಳ ನಡುವೆ ಹಂಚುವ ಯೋಜನೆಗೆ ನೀಡಿದ್ದರು. ಆರ್ಬಿಐ ಕೂಡ 9.87 ಲಕ್ಷ ಕೋಟಿ ರೂ. ಮೊತ್ತದ ಹಣಕಾಸಿನ ಉತ್ತೇಜಕ ಘೋಷಿಸಿತ್ತು.
ವಿತ್ತ ಸಚಿವೆ ಉಲ್ಲೇಖಿಸಿರುವ ಹದಿನೈದು ವಿವಿಧ ವಲಯಗಳಲ್ಲಿ ಲಘು, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಂದ (ಎಂಎಸ್‌ಎಂಇ – ಮೈಕ್ರೊ, ಸ್ಮಾಲ್, ಮೀಡಿಯಂ ಎಂಟರ್‌ಪ್ರೈಸಸ್) ಹಿಡಿದು ವಿದ್ಯುತ್ ವಿತರಣಾ ಕಂಪನಿಗಳವರೆಗೆ ಸೇರಿದ್ದು, “ಆತ್ಮನಿರ್ಭರ ಭಾರತ”ದ ಆತ್ಮವನ್ನು ಅವು ಪ್ರತಿಫಲಿಸಿವೆ.
ನಮ್ಮ ಆಂತರಿಕ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ನಾವು ಹೊರಗಿನವರ ಮೇಲೆ ಅವಲಂಬನೆಯಾಗಬಾರದು ಎಂಬ ಸಂದೇಶವನ್ನು ಕೊರೊನಾ ಅನಾಹುತ ನೀಡಿದ್ದು, ನಮ್ಮ ಹಳ್ಳಿಗಳು, ಜಿಲ್ಲೆಗಳು, ರಾಜ್ಯಗಳು… ಹೀಗೆ ಇಡೀ ದೇಶವೇ ಸ್ವಾವಲಂಬನೆ ಸಾಧಿಸಲು ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಅವರು ಹದಿನೈದು ದಿನಗಳ ಹಿಂದೆ ಘೋಷಿಸಿದ್ದರು. ಈಗ ದ್ವಿತಿಯಾರ್ಧದ ಬಾಹುಬಲಿ ಪ್ಯಾಕೇಜ್ ಘೋಷಣೆಯೊಂದಿಗೆ, ಸದರಿ ಪ್ಯಾಕೇಜನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಸರಕಾರ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕಿದೆ.
ಮೊದಲ ಹಂತದ ದೇಶವ್ಯಾಪಿ ದಿಗ್ಬಂಧನ ಘೋಷಣೆಯಾದ ಎರಡನೇ ದಿನಗಳಲ್ಲಿ “ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ” ಅಡಿಯಲ್ಲಿ ವಿತ್ತ ಸಚಿವರು 1.70 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜನ್ನು ಬಿಡುಗಡೆ ಮಾಡಿದ್ದರು. ಈ ಪ್ಯಾಕೇಜ್‌ನ ಮೊತ್ತ ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ – ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್) ಶೇ 0.8ರ ಪ್ರಮಾಣಕ್ಕೆ ಸಮನಾಗಿತ್ತು. ಇದರ ಜೊತೆಗೆ, ರಿಸರ್ವ್ ಬ್ಯಾಂಕ್ ಎರಡು ಹಂತಗಳಲ್ಲಿ ತೆಗೆದುಕೊಂಡ ಎರಡು ನೀತಿಗಳ ನಿರ್ಧಾರದ ಮೌಲ್ಯವು ಅಂದಾಜು ಶೇ 3ರಷ್ಟಿತ್ತು. ಇವೆರಡನ್ನೂ ಸೇರಿಸಿ, ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿರುವ 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್‌ನ ಪ್ರಮಾಣವು ಭಾರತದ ಜಿಡಿಪಿಯ ಶೇ 10ರಷ್ಟಾಗುತ್ತದೆ.