ನವದೆಹಲಿ: ತೆರಿಗೆ ಸಂಪನ್ಮೂಲ ಅಂದಾಜಿಸಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವರಮಾನ ಹಂಚಿಕೆ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನದ ಶಿಫಾರಸು ಮಾಡುವ ಮಾಜಿ ರಾಜ್ಯಸಭಾ ಸದಸ್ಯ ಎನ್.ಕೆ ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗವು ತನ್ನ ವರದಿಯನ್ನು ನವೆಂಬರ್ 30ರ ಅಂತ್ಯದೊಳಗೆ ಕೇಂದ್ರಕ್ಕೆ ಸಲ್ಲಿಸಲಿದೆ.
ಸುದ್ದಿ ಏಜೆನ್ಸಿಯ ವರದಿಯ ಪ್ರಕಾರ, ಆಯೋಗವು ಕೇಂದ್ರೀಯ ಪ್ರಾಯೋಜಿತ ಯೋಜನೆಗಳ ಬಗ್ಗೆ ಹೊಸ ವಿಮರ್ಶೆ ಮಂಡಿಸುವ ಸಾಧ್ಯತೆಯಿದೆ. ಕೆಲವು ಯೋಜನೆಗಳ ನಕಲು, ಕಳಪೆ ಫಲಿತಾಂಶಗಳು, ಹೆಚ್ಚುತ್ತಿರುವ ವಿನಿಯೋಗದ ದೃಷ್ಟಿಯಿಂದ ವಿಲೀನಗೊಳಿಸಲು ಸೂಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
15ನೇ ಹಣಕಾಸು ಆಯೋಗ ತನ್ನ ವರದಿಯನ್ನು ನವೆಂಬರ್ 30ರೊಳಗೆ ಸಲ್ಲಿಸಲು ಕಡ್ಡಾಯಗೊಳಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಅದರ ವರದಿಯನ್ನು ಸಲ್ಲಿಸುವ ಮೊದಲು ಕೇಂದ್ರೀಯ ಪ್ರಾಯೋಜಿತ ಕೆಲವು ಯೋಜನೆಗಳ ನಿರ್ಮೂಲನೆಗೆ ಸಂಬಂಧಿಸಿದಂತೆ ಏನನ್ನೂ ನಿರೀಕ್ಷಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಕಾರ್ಪೊರೇಟ್ ತೆರಿಗೆ ಕಡಿತದಿಂದ ಈಗಾಗಲೇ 1.45 ಲಕ್ಷ ಕೋಟಿ ರೂ. ಆದಾಯ ಕ್ಷೀಣಿಸಿದೆ. ಹಣಕಾಸಿನ ನೆರವು ನೀಡುತ್ತಿರುವುದರಿಂದ ಕೇಂದ್ರೀಯ ಪ್ರಾಯೋಜಿತ ಯೋಜನೆಗಳ (ಸಿಎಸ್‌ಎಸ್) ಸಂಖ್ಯೆ ಮತ್ತು ಖರ್ಚುಗಳನ್ನು ತರ್ಕಬದ್ಧಗೊಳಿಸುವ ಬಗ್ಗೆ ಸಚಿವಾಲಯ ಬಯಸಿದೆ. 'ಕಲ್ಯಾಣ ಯೋಜನೆಗಳಿಗೆ ತೊಂದರೆ ಆಗುವುದಿಲ್ಲ' ಎಂದು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಭರವಸೆ ನೀಡಿದ್ದಾರೆ. 14ನೇ ಎಫ್‌ಸಿ ಮುಂದಿನ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, ಯೋಜನೆಗಳ ಪರಿಶೀಲನೆಗೆ ಇದು ಸರಿಯಾದ ಸಮಯವಾಗಿದೆ.
ಸರ್ಕಾರ ಈಗಾಗಲೇ ಕೇಂದ್ರ ಪ್ರಾಯೋಜಿತ ಯೋಜನೆಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದು, 66 ರಿಂದ 28ಕ್ಕೆ ತಂದು ನಿಲ್ಲಿಸಿದೆ. ಗ್ರಾಮೀಣರಿಗೆ ಕುಡಿಯುವ ನೀರು ಪೂರೈಸಲು ಕೊಳವೆ ಮಾರ್ಗ, ಸ್ವಚ್ಛ ಭಾರತ್ ಮತ್ತು ಆಯುಷ್ಮಾನ್ ಭಾರತ್ ನಂತಹ ಅನೇಕ ಸಿಎಸ್ಎಸ್ ಯೋಜನಗಳಿವೆ. ಆಯೋಗವು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿನ ಸಾಧನೆ ಮತ್ತು ನ್ಯೂನತೆಗಳನ್ನು ಪಟ್ಟಿ ಮಾಡಿ ಪ್ರಕಟಿಸಲಿದೆ.
ಸಂವಿಧಾನದ ಕಲಂ 280ರ ಅನ್ವಯ, ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತದೆ. ಈ ಆಯೋಗವು ತೆರಿಗೆ ವರಮಾನವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡುವ ಸೂತ್ರ ಸೇರಿದಂತೆ ಕೇಂದ್ರದ ಯೋಜನೆಗಳ ಸಾಧಕ-ಬಾಧಕಗಳನ್ನು ವಿಮರ್ಶೆ ಮಾಡುತ್ತದೆ.