ನವದೆಹಲಿ: ಭಾರತದ ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಡಿಸೆಂಬರ್‌ನಲ್ಲಿ ಋಣಾತ್ಮಕವಾಗಿದ್ದು, ಶೇ 0.3ರಷ್ಟು ಕುಗ್ಗಿದೆ ಎಂದು ಸರ್ಕಾರದ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ.
ಉತ್ಪಾದನಾ ವಲಯದ ಉತ್ಪಾದನೆಯಲ್ಲಿನ ಕುಸಿತವೇ ಇಳಿಕೆಗೆ ಮುಖ್ಯ ಕಾರಣ ಎಂದಿದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಪ್ರಕಾರ, 2018ರ ಡಿಸೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆ ಶೇ 2.5ರಷ್ಟು ಬೆಳವಣಿಗೆ ದಾಖಲಿಸಿತ್ತು.
ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಕಳೆದ ವರ್ಷದ ನವೆಂಬರ್ನಲ್ಲಿ ಶೇ 1.8ರಷ್ಟು ಸಕರಾತ್ಮಕವಾಗಿತ್ತು. ಆಗಸ್ಟ್ (ಶೇ -1.4ರಷ್ಟು), ಸೆಪ್ಟೆಂಬರ್ (ಶೇ -4.6ರಷ್ಟು) ಹಾಗೂ ಅಕ್ಟೋಬರ್ (ಶೇ -4ರಷ್ಟು) ಬೆಳವಣಿಗೆ ಹೊಂದಿತ್ತು.
ಕೇಂದ್ರೀಯ ಸಾಂಖ್ಯಿಕ ಕಚೇರಿಯ ದತ್ತಾಂಶದ ಅನ್ವಯ, 2019ರ ಡಿಸೆಂಬರ್ನಲ್ಲಿನ ತಯಾರಿಕ ವಲಯದ ಉತ್ಪಾದನೆಯು ಶೇ 1.2ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 2.9ರಷ್ಟು ಬೆಳವಣಿಗೆ ಇದಿತ್ತು. ವಿದ್ಯುತ್ ಉತ್ಪಾದನೆ ಸಹ ಶೇ 0.1ರಷ್ಟು ಕ್ಷೀಣಿಸಿದ್ದು, 2018ರ ಡಿಸೆಂಬರ್‌ನಲ್ಲಿ ಶೇ 4.5ರಷ್ಟು ಇತ್ತು.
ಗಣಿಗಾರಿಕೆ ವಲಯದ ಉತ್ಪಾದನೆ ಶೇ 5.4ರಷ್ಟು ಏರಿಕೆಯಾಗಿದೆ. ಐಐಪಿ ಬೆಳವಣಿಗೆಯು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್- ಡಿಸೆಂಬರ್ ಅವಧಿಯಲ್ಲಿ ಶೇ 0.5ಕ್ಕೆ ಬಂದಿದೆ. 2018-19ರ ಇದೇ ಅವಧಿಯಲ್ಲಿ ಶೇ 4.7ರಷ್ಟಿತ್ತು.