ನವದೆಹಲಿ : ಲಾಕ್‌ಡೌನ್ ಸಮಯದಲ್ಲಿ ಚಂದಾದಾರರಿಗೆ ಪರಿಹಾರ ಒದಗಿಸಲು 280 ಕೋಟಿ ರೂ.ಗಳ 1.37 ಲಕ್ಷ ಭವಿಷ್ಯ ನಿಧಿ ವಾಪಸ್ ಮಾಡಲಾಗುತ್ತಿದೆ ಎಂದು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ತಿಳಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ), ದೇಶಾದ್ಯಂತ ಸುಮಾರು 1.37 ಲಕ್ಷ ಕ್ಲೇಮುಗಳ 279.65 ಕೋಟಿ ರೂ. ನಿಧಿಯನ್ನು ಹೊಸ ನಿಬಂಧನೆ ಅಡಿ ವಿತರಿಸಲಾಗುತ್ತಿದೆ. ಇಪಿಎಫ್ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಚಂದಾದಾರರಿಗೆ ಕೋವಿಡ್-19 ವಿರುದ್ಧ ಹೋರಾಡಲು ಈ ಹಣ ನೀಡಲಾಗುತ್ತಿದೆ ಎಂದು ಕಾರ್ಮಿಕ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಹಣ ವರ್ಗಾವಣೆ ಕಾರ್ಯ ಆರಂಭವಾಗಿದೆ. ಕಳೆದ ಹತ್ತು ದಿನದಲ್ಲಿ ಇಪಿಎಫ್‌ಒ 279.65 ಕೋಟಿ ರೂ. ವರ್ಗಾವಣೆ ಮಾಡಿದೆ. ಕೆವೈಸಿ ಪೂರ್ತಿ ಆಗಿರುವ ಗ್ರಾಹಕರ ಕ್ಲೇಮುಗಳನ್ನು 72 ಗಂಟೆ ಒಳಗೆ ಪ್ರಕ್ರಿಯೆ ಮಾಡಲಾಗುತ್ತಿದೆ. ಇತರ ಉದ್ದೇಶಗಳಿಗೆ ಅರ್ಜಿ ಹಾಕಿಕೊಂಡಿದ್ದ ಖಾತೆದಾರರಿಗೆ ಆದಷ್ಟು ಬೇಗ ಹಣ ಪಾವತಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಕೊರೊನಾ ವೈರಸ್ ಸೋಂಕು ಕಾರಣಕ್ಕೆ ಪಿಎಫ್ ವಿಥ್ ಡ್ರಾ ಮಾಡುವವರು ಅದೇ ಹಣವನ್ನು ಮತ್ತೆ ಮರುಪಾವತಿ ಮಾಡುವ ಅಗತ್ಯವಿಲ್ಲ. ವ್ಯಕ್ತಿಯು ಮೂರು ತಿಂಗಳ ಮೂಲವೇತನ+ ತುಟ್ಟಿಭತ್ಯೆ ಅಥವಾ ಶೇ.75ರಷ್ಟು ಮೊತ್ತ ಇವೆರಡರಲ್ಲಿ ಯಾವುದು ಕಡಿಮೆ ಇರುತ್ತೋ ಅಷ್ಟು ಹಣ ಡ್ರಾ ಮಾಡಿಕೊಳ್ಳಬಹುದು. ಇಲ್ಲವೇ ಅದಕ್ಕಿಂತ ಕಡಿಮೆ ಮೊತ್ತ ತೆಗೆದುಕೊಳ್ಳಬಹುದು. ಇದಕ್ಕೆ ಯಾವುದೇ ತೆರನಾದ ತೆರಿಗೆ ವಿಧಿಸುವುದಿಲ್ಲ.