ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭವಿಷ್ಯ ನಿಧಿ ಠೇವಣಿಗಳ ಮೇಲೆ ಶೇ 8.5ರಷ್ಟು ಬಡ್ಡಿದರ ಉಳಿಸಿಕೊಳ್ಳಲು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ನಿರ್ಧರಿಸಿದೆ.
2020-21ರ ಆರ್ಥಿಕ ವರ್ಷಕ್ಕೆ ಸದಸ್ಯರ ಖಾತೆಗಳಲ್ಲಿ ಇಪಿಎಫ್ ಕ್ರೋಢೀಕರಣದ ಮೇಲೆ ಜಮಾ ಮಾಡಲು ಶೇ 8.50ರಷ್ಟು ವಾರ್ಷಿಕ ಬಡ್ಡಿದರವನ್ನು ಕೇಂದ್ರ ಮಂಡಳಿ ಶಿಫಾರಸು ಮಾಡಿದೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀನಗರದಲ್ಲಿ ಗುರುವಾರ ನಡೆದ ಇಪಿಎಫ್‌ಒನ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ವಹಿಸಿದ್ದರು. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2020-21ರ ಅವಧಿಯಲ್ಲಿ ಭವಿಷ್ಯ ನಿಧಿ ಠೇವಣಿಗಳ ಬಡ್ಡಿ ದರಗಳನ್ನು ಶೇ 8.5ರಷ್ಟನ್ನು ಕಾಯ್ದುಕೊಂಡಿದೆ. ಇದು ಕಳೆದ 2019-20ರ ಹಣಕಾಸು ವರ್ಷದಂತೆಯೇ ಇದೆ ಎಂದು ಕಾರ್ಮಿಕ ಸಚಿವ ತಿಳಿಸಿದ್ದಾರೆ.
ಇದನ್ನೂ ಓದಿ: ವೇರೆಬಲ್ಸ್ ಮಾರಾಟ ಶೇ 144 ವೃದ್ಧಿ: ಮೂರಂಕಿಯಲ್ಲಿ ಅತಿಹೆಚ್ಚು ಜಿಗಿದ ಏಕೈಕ ರಾಷ್ಟ್ರ ಭಾರತ!
2016-17ನೇ ಸಾಲಿನಲ್ಲಿ ಇಪಿಎಫ್‌ಒ ನೌಕರರ ಭವಿಷ್ಯ ನಿಧಿ ಠೇವಣಿಗೆ ಶೇ 8.65ರಷ್ಟು ಬಡ್ಡಿದರ ಹಾಗೂ 2017-18ನೇ ಸಾಲಿನಲ್ಲಿ ಶೇ 8.55ರಷ್ಟು ಬಡ್ಡಿದರ ನೀಡಿತ್ತು. 2015-16ರಲ್ಲಿ ಶೇ 8.8ರಷ್ಟು ಬಡ್ಡಿ ದರ ನೀಡಲಾಗಿತ್ತು. 2019-20ರಲ್ಲಿ ಇಪಿಎಫ್ ಮೇಲಿನ ಬಡ್ಡಿದರವನ್ನು ಶೇ 8.5ಕ್ಕೆ ಇಳಿಸಿತ್ತು. ಇದು ಕಳೆದ 7 ವರ್ಷಗಳಲ್ಲಿ ಕನಿಷ್ಠ ಪ್ರಮಾಣದ್ದಾಗಿತ್ತು. 2014ರ ಹಣಕಾಸು ವರ್ಷದಿಂದ ಇಪಿಎಫ್‌ಒ ಸತತವಾಗಿ ಶೇ 8.50 ಪ್ರತಿಶತಕ್ಕಿಂತ ಕಡಿಮೆ ಆದಾಯ ಗಳಿಸಿದೆ.
ಕಳೆದ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ಏಪ್ರಿಲ್‌ನಿಂದ ವಾರ್ಷಿಕ 2.5 ಲಕ್ಷ ರೂ.ಗಿಂತ ಹೆಚ್ಚಿನ ಭವಿಷ್ಯ ನಿಧಿಗೆ ನೀಡುವ ಕೊಡುಗೆಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದರು.