ನವದೆಹಲಿ: ಇಂದಿನಿಂದ ಕೇಂದ್ರದ ವಾರ್ಷಿಕ ಬಜೆಟ್ ಅಧಿವೇಶನ ಆರಂಭವಾಗಿದೆ. ಉದ್ಯೋಗ ಸೃಷ್ಟಿ, ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳು ಹಾಗೂ ಹಣದುಬ್ಬರ ತಗ್ಗಿಸುವುದು ನಾಳೆ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಜನರ ನಿರೀಕ್ಷೆಗಳಲ್ಲಿ ಪ್ರಮುಖವಾಗಿವೆ ಎಂದು ಖ್ಯಾತ ಆರ್ಥಿಕ ತಜ್ಞ ಆಕಾಶ್ ಜಿಂದಾಲ್ ಹೇಳಿದ್ದಾರೆ.
'ಈಟಿವಿ ಭಾರತ'ಕ್ಕೆ ವಿಶೇಷ ಸಂದರ್ಶನ ನೀಡಿರುವ ಜಿಂದಾಲ್ ಅವರು, ಕೋವಿಡ್‌ನಿಂದ ದೇಶದಲ್ಲಿ ಉಂಟಾದ ಆರ್ಥಿಕ ನಷ್ಟದಿಂದಾಗಿ ಆರ್ಥಿಕ ಬೆಳವಣಿಗೆಯ ವೇಗವು ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮವಾಗಿ ಉತ್ಪಾದನೆಯು ತಗ್ಗಿದೆ. ಮಧ್ಯಮ ವರ್ಗ, ಬಡ ವರ್ಗಗಳು, ಸಣ್ಣ ವ್ಯಾಪಾರಿಗಳು ಹಾಗೂ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿ ಇಲ್ಲದ ಹಾಗೂ ಜನಪ್ರಿಯ ಬಜೆಟ್ ಅನ್ನು ನಿರೀಕ್ಷಿಸಬಹುದು ಎಂದಿದ್ದಾರೆ.
ಸಮಾಜದಲ್ಲಿ ಅಸಮತೋಲನ ಸೃಷ್ಟಿಸುವುದನ್ನು ತಪ್ಪಿಸಲು ಸರ್ಕಾರವು ಬಜೆಟ್‌ನಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಎರಡಕ್ಕೂ ಆದ್ಯತೆ ನೀಡಬೇಕು. ಈ ಸಮಸ್ಯೆಗಳನ್ನು ನಿಯಂತ್ರಿಸದಿದ್ದರೆ ಸಾಕಷ್ಟು ಸಾಮಾಜಿಕ ಅಶಾಂತಿಯನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಆಕಾಶ್ ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ.
'ವಸತಿ ಸಮಸ್ಯೆ ನಿವಾರಣೆ ಸರ್ಕಾರಕ್ಕೆ ಮುಖ್ಯ ಆದ್ಯತೆ'.. ವಸತಿ ಸಮಸ್ಯೆಗಳನ್ನು ನಿವಾರಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ನಾಳಿನ ಬಜೆಟ್‌ನಲ್ಲಿ ಗೃಹ ಸಾಲ ಕಡಿತದ ಮಿತಿಯ ಹೆಚ್ಚಳದ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಇನ್ನೊಂದು ಪ್ರಮುಖ ಆದ್ಯತೆಯನ್ನು ಕೃಷಿ ಕ್ಷೇತ್ರಕ್ಕೆ ನೀಡಬೇಕು. ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸರ್ಕಾರ ರದ್ದುಗೊಳಿಸಿದ್ದರೂ ಕೃಷಿ ಕ್ಷೇತ್ರವು ಇನ್ನೂ ಕರಾಳ ದಿನಗಳನ್ನು ಎದುರಿಸುತ್ತಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಶೇ.40ರಷ್ಟು ಹೆಚ್ಚಳವನ್ನು ನಿರೀಕ್ಷಿಸಬೇಕು. ಇದು ನಮ್ಮ ರೈತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಅಲ್ಪ ಮಟ್ಟಿಗೆ ಪರಿಹಾರವನ್ನೂ ನೀಡುತ್ತದೆ ಎಂದು ಜಿಂದಾಲ್ ವಿವರಿಸಿದ್ದಾರೆ.
ಮಹಾಮಾರಿ ಕೋವಿಡ್ ಕೇವಲ ಜನರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಸರ್ಕಾರಕ್ಕೂ ಹೊಡೆತ ನೀಡಿದೆ. ಸಮಾಜ ಕಲ್ಯಾಣ ಯೋಜನೆಗಳಾದ ಜನರಿಗೆ ಉಚಿತ ಆಹಾರ, ಉಚಿತ ಲಸಿಕೆ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿಕೆ ಹಿನ್ನೆಲೆಯಲ್ಲಿ ಸರ್ಕಾರ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಬಹುದಾದ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಸಮಾಜದ ಎಲ್ಲಾ ವರ್ಗದ ಜನರು ಈ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
'ಸೂಪರ್ ರಿಚ್ ಟ್ಯಾಕ್ಸ್' ಜಾರಿಗೆ ತನ್ನಿ.. 2020 ರಿಂದ ಮಹಾಮಾರಿ ಕೊರೊನಾ ವೈರಸ್ ಜಗತ್ತನ್ನ ತಲ್ಲಣಗೊಳಿಸಿದೆ. ಶ್ರೀಮಂತರು ಮತ್ತು ಬಡವರ ನಡುವಿನ ದೊಡ್ಡ ಅಂತರದ ಬಹಿರಂಗವಾಗಿ ಎದ್ದುಕಾಣುತ್ತಿದೆ ಎಂಬುದನ್ನು ಇಲ್ಲಿ ಗಮನಿಸುವುದು ಸೂಕ್ತವಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ವಿಸ್ತರಿಸುತ್ತಿರುವ ಈ ಎರಡು ವಿಭಾಗಗಳ ನಡುವಿನ ಅಂತರವನ್ನು ಕಡಿಮೆ ಮಾಡಲು, ಮಧ್ಯಮ ವರ್ಗ ಮತ್ತು ಬಡ ವರ್ಗದವರಿಗೆ ಸಹಾಯ ಮಾಡಲು ಸರ್ಕಾರವು 'ಸೂಪರ್ ರಿಚ್ ಟ್ಯಾಕ್ಸ್' ಅನ್ನು ತರಬೇಕು ಎಂದು ಆಕಾಶ್ ಜಿಂದಾಲ್ ಸಲಹೆ ನೀಡಿದ್ದಾರೆ.
ವರ್ಕ್ ಫ್ರಮ್ ಹೋಮ್ ಮಾಡೋರಿಗೆ ಗೃಹ ಕಚೇರಿ ಭತ್ಯೆ ಕಡಿತ..? ಸಾಂಕ್ರಾಮಿಕ ರೋಗ ಮತ್ತೆ ಉಲ್ಬಣಗೊಳ್ಳುವ ವಿಷಯ ಮತ್ತು ಮನೆಯಿಂದ ಕೆಲಸ ಹೆಚ್ಚು ಅಥವಾ ಕಡಿಮೆ ಶಾಶ್ವತ ವ್ಯವಹಾರವಾಗುತ್ತಿರುವ ಕುರಿತು ಪ್ರಸ್ತುತ ಬಜೆಟ್ ಅಧಿವೇಶನವು ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಗೃಹ ಕಚೇರಿ ಭತ್ಯೆಯಲ್ಲಿ ಕಡಿತ ಮಾಡುವ ನಿರೀಕ್ಷೆಯಿದೆ.
ಕೋವಿಡ್ -19 ರ ಪ್ರಾರಂಭದಿಂದಲೂ ಮನೆಯಿಂದ ಕೆಲಸವು ಟ್ರೆಂಡಿಂಗ್ ವ್ಯವಹಾರವಾಗಿರುವುದರಿಂದ ಕಾರ್ಪೊರೇಟ್ ಕೆಲಸದ ಸ್ಥಳಗಳಲ್ಲಿ ವಿದ್ಯುತ್ ಬಿಲ್ ಸೇರಿದಂತೆ ಇತರ ಹೆಚ್ಚುವರಿ ವೆಚ್ಚಗಳು ಕಡಿಮೆಯಾಗುತ್ತಿವೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಜನರಿಗೆ 40,000 ರಿಂದ 50,000 ರೂ. ವರೆಗೆ ಹೆಚ್ಚುವರಿ ವಿನಾಯಿತಿ ಇರುತ್ತದೆ. ಬಜೆಟ್ ಇದನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಹಣಕಾಸು ವರ್ಷ 2020-2021 ದೇಶದ ಆರ್ಥಿಕತೆಗೆ ಪ್ರತಿಕೂಲವಾಗಿ ಹೊಡೆತ ಬಿದ್ದಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ದೇಶದ ಜಿಡಿಪಿ ಸತತ ಎರಡು ತ್ರೈಮಾಸಿಕಗಳ ನಕಾರಾತ್ಮಕ ಬೆಳವಣಿಗೆಯನ್ನು ಕಂಡಿದೆ. ಈ ಸಮೀಕರಣದಲ್ಲಿ ಪ್ರಸ್ತಕ ವರ್ಷದಲ್ಲಿ ಜಿಡಿಪಿ ಈಗಾಗಲೇ ಪುಟಿದೇಳುವ ಮುನ್ಸೂಚನೆ ನೀಡಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಭೀತಿಯ ಹೊರತಾಗಿಯೂ ಆರ್ಥಿಕತೆ ವೃದ್ಧಿಯು ದೃಢವಾದ ನಂಬಿಕೆಗೆ ಸಾಕ್ಷಿಯಾಗಿದೆ. ದೇಶವು ಈ ವರ್ಷ ಶೇ.9ರಷ್ಟು ಜಿಡಿಪಿಯನ್ನು ನಿರೀಕ್ಷಿಸುತ್ತಿದೆ ಎಂದು ಜಿಂದಾಲ್ ಹೇಳಿದರು.
ಒಂದು ವೇಳೆ ಜಿಡಿಪಿ ಶೇ.9ಕ್ಕೆ ಬಂದರೆ ಚೀನಾ, ಅಮೆರಿಕ, ಜರ್ಮನಿ ಮತ್ತು ಜಪಾನ್ ದೇಶಗಳಂತೆ ಭಾರತವೂ ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತದೆ ಎಂದು ಆರ್ಥಿಕ ತಜ್ಞ ಆಕಾಶ್ ಜಿಂದಾಲ್ ಭವಿಷ್ಯ ನುಡಿದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ