ನಾಗ್ಪುರ್: ದೇಶ ಆರ್ಥಿಕ ಕುಸಿತ ಎದುರಿಸುತ್ತಿದೆ ಎಂಬುದನ್ನು ಪ್ರಧಾನಿ ಮೋದಿ ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲವಾದರೂ ಎನ್‌ಡಿಎನ ಹಿರಿಯ ಸಚಿವರಲ್ಲಿ ಒಬ್ಬರಾದ ನಿತಿನ್ ಗಡ್ಕರಿ ಅವರು, ಭಾರತೀಯ ಕೈಗಾರಿಕೆಗಳು 'ಕಠಿಣ ಸಮಯ ಎದುರಿಸುತ್ತಿವೆ' ಎಂಬ ಅಂಶವನ್ನು ಒಪ್ಪಿಕೊಂಡಿದ್ದಾರೆ.
ವಿದರ್ಭ ಕೈಗಾರಿಕಾ ಸಂಘದ 65ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಕಳಪೆ ಮಾರಾಟದ ಭೀಕರತೆ... ಆದಾಯ ಕುಸಿತದಂತಹ ಈ ದುಸ್ಥಿತಿಯ ಸಮಯ ಕಳೆದು ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆಗಳು ಈಗ ಕಠಿಣ ಸಮಯವನ್ನು ಎದುರಿಸುತ್ತಿವೆ ಎಂಬುದು ನನಗೆ ತಿಳಿದಿದೆ. ನಾವು ಬೆಳವಣಿಗೆಯ ದರವನ್ನು ಹೆಚ್ಚಿಸಲು ಬಯಸುತ್ತೇವೆ. ಇತ್ತೀಚೆಗೆ ನಾನು ಅಖಿಲ ಭಾರತ ಆಟೋಮೊಬೈಲ್ ಸಮಾವೇಶದಲ್ಲಿ ವಾಹನ ತಯಾರಕರನ್ನು ಭೇಟಿಯಾಗಿದ್ದೆ. ಅವರೆಲ್ಲರೂ ಈ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.
'ನಾನು ಅವರಿಗೆ ಹೇಳಿದೆ, ಕಬಿ ಖುಷಿ ಹೋತಿ ಹೈ ಕಬಿ ಗಮ್ ಹೋತಾ ಹೈ (ಸಂತೋಷದ ಕ್ಷಣಗಳಿವೆ ಮತ್ತು ದುಃಖದ ಗಳಿಗೆಗಳೂ ಇರುತ್ತವೆ). ಕೆಲವೊಮ್ಮೆ ನೀವು ಯಶಸ್ವಿಯಾಗುತ್ತೀರಿ, ಕೆಲವೊಮ್ಮೆ ನೀವು ವಿಫಲರಾಗುತ್ತೀರಿ... ಜೀವನ ಒಂದು ರೀತಿಯಲ್ಲಿ ಚಕ್ರವಿದ್ದಂತೆ. ಆದರಿಂದ, ನಿಮ್ಮ ಜೀವನದಂತೆ ಜಾಗತಿಕ ಆರ್ಥಿಕತೆ, ಬೇಡಿಕೆ ಮತ್ತು ಪೂರೈಕೆ, ವ್ಯಾಪಾರ ಚಕ್ರಗಳು ಕೆಲವೊಮ್ಮೆ ಸಣ್ಣ ಸಮಸ್ಯೆಗಳನ್ನು ಎದುರಿಸುತ್ತವೆ. ಪ್ರಪಂಚವೂ ಸಹ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದ ನಿರಾಸೆಗೊಳ್ಳಬೇಡಿ. ಈ ಸಮಯ ಕಳೆದುಹೋಗಲಿದೆ ಎಂದು ರೂಪಕವಾಗಿ ಕೇಂದ್ರ ಸಚಿವ ಗಡ್ಕರಿ ಉದ್ಯಮಿಗಳಿಗೆ ಧೈರ್ಯ ತುಂಬಿದ್ದಾರೆ.