ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್, ಎಂಎಸ್‌ಎಂಇ ಹೊರತುಪಡಿಸಿದರೆ ಉಳಿದಂತೆ ನಿರಾಶೆಗೊಳಿಸುತ್ತದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಕೇಂದ್ರವು 3.6 ಲಕ್ಷ ಕೋಟಿ ರೂ.ಗಳನ್ನು ಸಣ್ಣ ಉದ್ಯಮಗಳಿಗೆ ಸಾಲ ನೀಡಿಕೆಗೆ ಘೋಷಿಸಿದೆ. ಉಳಿದ 16.4 ಲಕ್ಷ ಕೋಟಿ ರೂ. ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಹೆಚ್ಚು ಹಣ ಖರ್ಚು ಮಾಡಬೇಕು. ಹೆಚ್ಚು ಸಾಲ ಪಡೆಯಬೇಕು ಮತ್ತು ರಾಜ್ಯಗಳಿಗೂ ಹೆಚ್ಚು ಸಾಲ ಪಡೆಯಲು ಅವಕಾಶ ನೀಡಬೇಕು. ಆದರೆ, ಅವರು ಅದನ್ನು ಮಾಡಲು ಸಿದ್ಧರಿಲ್ಲ. ಈ ಸರ್ಕಾರವು ತನ್ನದೇ ಆದ ಅಜ್ಞಾನ ಮತ್ತು ಭಯದ ಕೈದಿಯಾಗಿದೆ ಎಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ವಿತ್ತ ಸಚಿವರು ಹೇಳಿದ್ದರಲ್ಲಿ ಏನೂ ಇಲ್ಲ. ಲಕ್ಷಾಂತರ ಬಡವರು, ಹಸಿದ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ನಿತ್ಯ ಶ್ರಮಿಸುತ್ತಿರುವವರಿಗೆ ಇದು ಕ್ರೂರವಾದ ಹೊಡೆತ ಎಂದಿದ್ದಾರೆ.