ನವದೆಹಲಿ: ಕೋವಿಡ್ -19 ಸಾಂಕ್ರಾಮಿಕವು ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ವಿದ್ಯುತ್ ಕ್ಷೇತ್ರದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದ್ದು, ಮೊದಲ ತ್ರೈಮಾಸಿಕ ಅವಧಿಯಲ್ಲಿ ತೀವ್ರವಾದ ಮಂದಗತಿ ಮತ್ತಷ್ಟು ಮುಂದುವರೆದಿದೆ.
ವಿದ್ಯುತ್ನ ಬಳಕೆಯ ಪ್ರಮಾಣವು ಸಾಕಷ್ಟು ಕೆಳಮಟ್ಟದಲ್ಲಿದ್ದು, ಬೇಡಿಕೆ ಮತ್ತು ಪೂರೈಕೆ ಎರಡರ ಮೇಲೂ ಇದು ಪರಿಣಾಮ ಬೀರುತ್ತದೆ. ಇದರಿಂದಾಗಿ ಡಿಸ್ಕಾಮ್ಗಳ (ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗಳ) ಒತ್ತಡದ ಮಟ್ಟ ಹೆಚ್ಚಾಗಲಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಡಿಸ್ಕಾಮ್ಗಳ ಸಾಲದ ಪ್ರಮಾಣ ಸಾರ್ವಕಾಲಿಕ ಗರಿಷ್ಠ 4.5 ಲಕ್ಷ ಕೋಟಿ ರೂ.ಗೆ ತಲುಪಲಿದೆ. ಈ ಹಿಂದೆ ಸರ್ಕಾರ ಘೋಷಿಸಿದ್ದ 90,000 ಕೋಟಿ ರೂ. ದ್ರವ್ಯತೆ ಪ್ಯಾಕೇಜ್ ಕಂಪನಿಗಳಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಡಿಸ್ಕಾಮ್ಗಳ ಸುಸ್ಥಿರತೆಗೆ ರಚನಾತ್ಮಕ ಸುಧಾರಣೆಗಳು ನಿರ್ಣಾಯಕವಗಲಿವೆ ಎಂದು ಕ್ರಿಸಿಲ್ ರೇಟಿಂಗ್ಸ್ ಕೂಡ ಜೂನ್ ತಿಂಗಳಲ್ಲಿ ತಿಳಿಸಿತ್ತು.
ವಿಶ್ಲೇಷಕರ ಪ್ರಕಾರ, ಸಾಂಕ್ರಾಮಿಕ ಸಮಯದಲ್ಲಿ ಈ ವಲಯದ ಕಳಪೆ ಬೆಳವಣಿಗೆಯು ವಿದ್ಯುತ್ ವಿತರಣಾ ಕಂಪನಿಗಳ (ಡಿಸ್ಕಾಮ್) ಆರ್ಥಿಕ ಸ್ಥಿತಿ ಮತ್ತಷ್ಟು ಕ್ಷೀಣಿಸಲು ಕಾರಣವಾಗಿದೆ. ವಿದ್ಯುತ್ ಉತ್ಪಾದನಾ ಕಂಪನಿಗಳ (ಜೆಂಕೋಸ್) ಬಾಕಿ ಶೇ 48ರಷ್ಟು ಹೆಚ್ಚಾಗಿದೆ. 2020ರ ಸೆಪ್ಟೆಂಬರ್ನಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 1.27 ಲಕ್ಷ ಕೋಟಿ ರೂ.ಗಳಷ್ಟಾಗಿದೆ.
ಆತ್ಮನಿರ್ಭರ ಭಾರತ ಮಿಷನ್ ಅಡಿ ಕೇಂದ್ರವು 1.2 ಲಕ್ಷ ಕೋಟಿ ರೂ. ದ್ರವ್ಯತ ಅನುದಾನ ಬಿಡುಗಡೆ ಮಾಡಿತು. ಆರ್‌ಇಸಿ ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ (ಪಿಎಫ್‌ಸಿ) ಬಿಡುಗಡೆ ಮಾಡಿದ ದ್ರವ್ಯತೆ ಡಿಸ್ಕಾಮ್ಗಳಿಗೆ ತಮ್ಮ ಬಾಕಿ ಹಣ ಪಾವತಿಸಲು ಸಹಾಯ ಮಾಡುತ್ತಿದೆ. ಆದರೂ ಅವುಗಳ ಒಟ್ಟಾರೆ ಕಳಪೆ ಆರ್ಥಿಕ ಪರಿಸ್ಥಿತಿಯು ಪ್ರತಿ ತಿಂಗಳು ಬಾಕಿ ಉಳಿದುಕೊಳ್ಳುತ್ತಲೇ ಇದೆ.
ಡಿಸ್ಕಾಮ್ಗಳ ಒಟ್ಟು ಬಾಕಿ 1.39 ಲಕ್ಷ ಕೋಟಿ ರೂ. (ವರ್ಷದಿಂದ ವರ್ಷಕ್ಕೆ ಶೇ 28 / ಮಾಸಿಕದಿಂದ ಮಾಸಿಕಕ್ಕೆ ಶೇ 3ರಷ್ಟು) ಆಗಿದೆ. ಇದು 2015ರ ನವೆಂಬರ್ ಬಳಿಕದ ಗರಿಷ್ಠ 1.35 ಲಕ್ಷ ಕೋಟಿ ರೂ. ಗಡಿ ದಾಟಿದೆ. ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಜೆ&ಕೆ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಶೇ 79ರಷ್ಟು ಪಾಲು ಹೊಂದಿವೆ.