ನವದೆಹಲಿ: ಭಾರತ- ಇಂಗ್ಲೆಂಡ್ನ ವಾಣಿಜ್ಯ ಸಹಭಾಗಿತ್ವ ಹೆಚ್ಚಿಸಲು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು "ಯುಕೆಯಲ್ಲಿ ವಿನ್ಯಾಸಗೊಳಿಸಿ (ಡಿಸೈನ್ ಇನ್ ಯುಕೆ), ಭಾರತದಲ್ಲಿ ತಯಾರಿಸಿ (ಮೇಡ್ ಇನ್ ಇಂಡಿಯಾ)" ಎಂಬ ಹೊಸ ಪರಿಕಲ್ಪನೆ ನೀಡಿದ್ದಾರೆ.
ಇಂಗ್ಲೆಂಡ್ - ಭಾರತ ಜಂಟಿ ಆರ್ಥಿಕ ಸಹಭಾಗಿತ್ವದ ವಾಣಿಜ್ಯ ಸಭೆಯಲ್ಲಿ ಮಾತನಾಡಿದ ಅವರು, ಬ್ರಿಟಿಷ್ ಉದ್ಯಮ ಮತ್ತು ಅಕಾಡೆಮಿಗಳಲ್ಲಿನ ಸಂಶೋಧನೆ ಮತ್ತು ನಾವೀನ್ಯತೆಯ ಮನೋಭಾವವು ನುರಿತ ಭಾರತೀಯ ಕಾರ್ಯಪಡೆಯ ಬಲದೊಂದಿಗೆ ಜೊತೆಗೂಡಿದರೆ, ಉಭಯ ದೇಶಗಳು ವಿಶ್ವದ ಇತರ ರಾಷ್ಟ್ರಗಳ ಆದ್ಯತೆಗಳನ್ನು ಪೂರೈಕೆ ಮಾಡುವಂತಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಬ್ರಿಟಿಷ್ ಸಂಶೋಧನಾ ಪ್ರಯೋಗಾಲಯಗಳಲ್ಲಿ ಹೊಳೆಯುವ ಆಲೋಚನೆಗಳನ್ನು ಅನುಷ್ಠಾನದ ಹಂತಕ್ಕೆ ತರುವ ಸಾಮರ್ಥ್ಯವನ್ನು ನುರಿತ ಮಾನವ ಶಕ್ತಿ ಭಾರತ ಹೊಂದಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿನ ಉತ್ಪಾದನಾ ವೆಚ್ಚ ಸ್ಪರ್ಧಾತ್ಮಕ ವಾತಾವರಣದಿಂದ ಕೂಡಿದೆ. ಭಾರತದಲ್ಲಿ ಬ್ರಿಟಿಷ್ ಕಂಪನಿಗಳು ತೆರೆದುಕೊಂಡರೆ ತಮ್ಮ ಹೆಜ್ಜೆಗುರುತುಗಳನ್ನು ವಿಶ್ವದ ಇತರ ಭಾಗಗಳಿಗೆ ವಿಸ್ತರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಗೋಯಲ್ ಬಂಡವಾಳ ಹೂಡಿಕೆಗೆ ಆಹ್ವಾನಿಸಿದರು.