ನವದೆಹಲಿ: ಕೇಂದ್ರ ಸರ್ಕಾರ ಮಹತ್ವದ ಬಜೆಟ್ ಮಂಡನೆ ಹಿನ್ನೆಲೆ ನಿನ್ನೆ ನಿವೃತ್ತಿ ವಯೋಮಿತಿಯನ್ನು ವಿಸ್ತರಣೆ ಮಾಡುವ ವಿಚಾರವನ್ನು ಎಕನಾಮಿಕ್ ಸರ್ವೆ ಪ್ರಸ್ತಾಪಿಸಿದೆ.
ಭಾರತದ ಮಾನವ ಜೀವಿತಾವಧಿ ಮಿತಿಯೂ ಏರಿಕೆಯಾಗುತ್ತಿರುವ ಕಾರಣ, ಮಹಿಳೆ ಹಾಗೂ ಪುರುಷರಿಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ನಿವೃತ್ತಿಯ ವಯೋಮಿತಿಯನ್ನು ಹೆಚ್ಚಿಸುವ ಬಗ್ಗೆ ಸರ್ವೇ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
2016ರಲ್ಲಿ ಭಾರತೀಯರ ಜೀವಿತಾವಧಿಯು ಸರಾಸರಿ 60 ವರ್ಷಗಳಾಗಿದೆ. ಮುಂದಿನ 20 ವರ್ಷಗಳಲ್ಲಿ ಪುರುಷರಲ್ಲಿ 60 ವರ್ಷಗಳಿಗಿಂತ ಹೆಚ್ಚುವರಿಯಾಗಿ 12.5 ವರ್ಷಗಳು ಹಾಗೂ ಮಹಿಳೆಯರಲ್ಲಿ 13.3 ವರ್ಷಗಳು ವಿಸ್ತರಣೆಯಾಗಲಿದೆ.
ಪ್ರಸ್ತುತ ಸರ್ಕಾರಿ ಉದ್ಯೋಗಿಗಳ ಸೇವಾವಧಿ 60 ವರ್ಷಗಳಾಗಿದ್ದು, ಖಾಸಗಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಸೇವಾವಧಿ ನಿರ್ಧರಿಸುತ್ತಿವೆ. ಶಿಕ್ಷಕ, ವೈದ್ಯ ಹಾಗೂ ನ್ಯಾಯಮೂರ್ತಿಗಳು ಸಹ ಹೆಚ್ಚು ಕಾಲ ಸೇವೆ ಸಲ್ಲಿಸಬೇಕೆಂಬ ನಿರೀಕ್ಷೆಯಿದೆ.
ಈ ಸಲಹೆ ಭಾಗಶಃ ಅನಿವಾರ್ಯವಾಗಿದ್ದು, ಪೆನ್ಷನ್ ಹಾಗೂ ನಿವೃತ್ತ ಯೋಜನೆಗಳಿಗೆ ಅನುಕೂಲವಾಗಲಿದೆ. ಇದರ ಜತೆಗೆ ಮುಂದಿನ 2 ದಶಕಗಳಲ್ಲಿ 55-60 ಲಕ್ಷ ಉದ್ಯೋಗಳು ಸೃಷ್ಟಿಯಾಗಬೇಕೆಂದೂ ಸರ್ವೇ ಹೇಳಿದೆ.