ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯ (ಪಿಎಂಎಂವೈ) ಶಿಶು ವಿಭಾಗದ ಅಡಿಯಲ್ಲಿ ಅರ್ಹ ಸಾಲಗಾರರಿಗೆ ಶೇ 2ರಷ್ಟು ಬಡ್ಡಿ ಸಬ್ವೆನ್ಷನ್ (ದ್ರವ್ಯ ನೆರವು) ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಮುದ್ರಾ ಯೋಜನೆಯ ಶಿಶು ವರ್ಗದ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ₹ 50,000 ವರೆಗಿನ ಮೇಲಾಧಾರ ಮುಕ್ತ ಸಾಲ (ಶ್ಯೂರಿಟಿ ಇಲ್ಲದೆ) ನೀಡಲು ಸರ್ಕಾರ ನಿರ್ಧರಿಸಿದೆ.
ಪಿಎಂಎಂವೈ ಅಡಿಯಲ್ಲಿ ಶಿಶು ಸಾಲ ವರ್ಗದ ಸಾಲಗಾರರಿಗೆ ಶೇ 2ರಷ್ಟು ಬಡ್ಡಿ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು 2020ರ ಮಾರ್ಚ್ 31ಕ್ಕೆ ಬಾಕಿ ಉಳಿದಿದ್ದು, ಅರ್ಹ ಸಾಲಗಾರರಿಗೆ 12 ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಡೈರಿ, ಕೋಳಿ ಮತ್ತು ಮಾಂಸ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಖಾಸಗಿ ವರ್ತಕರಿಗೆ ಶೇ 3ರಷ್ಟು ಬಡ್ಡಿಯ ನೆರವು ಒದಗಿಸಲು ಸರ್ಕಾರವು ₹ 15,000 ಕೋಟಿ ಮೂಲಸೌಕರ್ಯ ನಿಧಿ ಘೋಷಿಸಿದೆ ಎಂದರು.
ಇನ್ನೊಂದೆಡೆ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಉಳಿದ ಹಿಂದುಳಿದ ವರ್ಗಗಳ (ಒಬಿಸಿ) ಆಯೋಗದ ಅಧಿಕಾರಾವಧಿಯನ್ನು 6 ತಿಂಗಳವರೆಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ.