ಇಸ್ಲಮಾಬಾದ್: ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ವಿರೋಧಿಸಿ ಭಾರತದೊಂದಿಗೆ ಪಾಕಿಸ್ತಾನ ತೆಗೆದುಕೊಂಡ ವಾಣಿಜ್ಯ ವಹಿವಾಟು ಹಿಂತೆಗೆತ ಸೇರಿದಂತೆ ಇತರ ನಿಲುವುಗಳಿಗೆ ಬೆಂಬಲಿಸುವುದಾಗಿ ಹಾಗೂ ಈ ಹಿಂದಿನ ಬದ್ಧತೆಗಳಿಗೆ ಅಚಲವಾಗಿ ನಿಲುವುದಾಗಿ ಚೀನಾ ಹೇಳಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ಶುಕ್ರವಾರ ಚೀನಾದ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ಹಿಂಪಡೆದಿದೆ ಎಂದು ದೂರು ಸಲ್ಲಿಸಿದ್ದಾರೆ.
ಸಭೆಯ ಬಳಿಕ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಕಾಶ್ಮೀರದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಬೀಜಿಂಗ್ ಗಂಭೀರವಾಗಿ ಗಮನಿಸುತ್ತಿದೆ. ಕಾಶ್ಮೀರ ಸಮಸ್ಯೆ ವಸಾಹತುಶಾಹಿ ಕಾಲದಿಂದ ಉಳಿದಿಕೊಂಡಿರುವ ವಿವಾದವಾಗಿದೆ. ಅದು ಸರಿಯಾದ ದಿಕ್ಕಿನಲ್ಲಿ ಹೋಗಬೇಕು ಎಂದಿದ್ದಾರೆ.
ವಿಶ್ವ ಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯಗಳ ಆಧಾರದ ಮೇಲೆ ಶಾಂತಿಯುತವಾಗಿ ಪರಿಹರಿ ಕಂಡುಕೊಳ್ಳಬೇಕು. ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದ ಮೂಲಕ ಪರಿಹರಿಸಿಕೊಳ್ಳಬೇಕು. ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳಬಾರದು ಎಂದು ವಾಂಗ್ ಸಲಹೆ ನೀಡಿದ್ದಾರೆ.