ಬೀಜಿಂಗ್: ಚೀನಾದ ಮೊಬೈಲ್ ಅಪ್ಲಿಕೇಷನ್‌ಗಳನ್ನು ಭಾರತ ನಿಷೇಧಿಸುವುದನ್ನು ಬಲವಾಗಿ ವಿರೋಧಿಸುವುದಾಗಿ ಚೀನಾದ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಗಾವೊ ಫೆಂಗ್, ಚೀನಾದ ಕಂಪನಿಗಳ ಮೇಲೆ ತಾರತಮ್ಯ ನಿರ್ಬಂಧಗಳನ್ನು ಹೇರುವ ಮೂಲಕ ಭಾರತವು ರಾಷ್ಟ್ರೀಯ ಭದ್ರತಾ ನಿಯಮಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಚೀನಾದ ಸರ್ಕಾರಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಭಾರತೀಯ ಕ್ರಮಗಳು ಚೀನಾದ ಹೂಡಿಕೆದಾರರು ಮತ್ತು ಸೇವಾ ಪೂರೈಕೆದಾರರ ಕಾನೂನು ಹಿತಾಸಕ್ತಿಗಳನ್ನು ಉಲ್ಲಂಘಿಸುತ್ತವೆ. ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಭಾರತಕ್ಕೆ ಹೇಳಿದ್ದಾಗಿ ವಾಣಿಜ್ಯ ಸಚಿವಾಲಯದ ವಕ್ತಾರ ಗಾವೊ ಫೆಂಗ್ ಬ್ರೀಫಿಂಗ್ ವೇಳೆ ತಿಳಿಸಿದರು.
ಡೇಟಾ ಸುರಕ್ಷತೆಯ ಕಾಳಜಿಯನ್ನು ಉಲ್ಲೇಖಿಸಿ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಜನಪ್ರಿಯ ವೀಡಿಯೊಗೇಮ್ ಪಬ್ಜಿ ಸೇರಿದಂತೆ 118 ಹೆಚ್ಚು ಚೀನೀ ಮೊಬೈಲ್ ಅಪ್ಲಿಕೇಷನ್‌ಗಳನ್ನು ಭಾರತ ನಿಷೇಧಿಸಿದೆ. ಭದ್ರತೆಯ ನಿಯಮ ಉಲ್ಲಂಘನೆಯಡಿ ಭಾರತ ಇದುವರೆಗೂ 228 ಚೀನಾ ಮೂಲದ ಆ್ಯಪ್ಗಳನ್ನು ನಿಷೇಧಿಸಿದೆ.
ತನ್ನ ಕ್ರಮವನ್ನು ಮರುಪರಿಶೀಲಿಸುವಂತೆ ಭಾರತವನ್ನು ಒತ್ತಾಯಿಸಿದ ಗಾವೊ, ಚೀನಾ-ಭಾರತ ಆರ್ಥಿಕ ಮತ್ತು ವ್ಯಾಪಾರ ಸಹಕಾರವು ಪರಸ್ಪರ ಲಾಭವನ್ನು ನೀಡುತ್ತದೆ ಎಂದರು.
ತಮ್ಮ ಸಾಗರೋತ್ತರ ಕಾರ್ಯಾಚರಣೆಗಳಲ್ಲಿ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸುವಂತೆ ಚೀನಾ ಯಾವಾಗಲೂ ತನ್ನ ಕಂಪನಿಗಳನ್ನು ಕೇಳಿಕೊಳ್ಳುತ್ತದೆ ಎಂದು ಅವರು ಪ್ರತಿಪಾದಿಸಿದರು.
ಚೀನಾದ ಕಂಪೆನಿಗಳು ಸೇರಿದಂತೆ ಅಂತಾರಾಷ್ಟ್ರೀಯ ಹೂಡಿಕೆದಾರರು ಮತ್ತು ಸೇವಾ ಪೂರೈಕೆದಾರರಿಗೆ ಮುಕ್ತ ಮತ್ತು ನ್ಯಾಯಯುತ ವ್ಯಾಪಾರ ವಾತಾವರಣವನ್ನು ನಿರ್ಮಿಸಲು ಕಠಿಣ ದ್ವಿಪಕ್ಷೀಯ ಸಹಕಾರ ಅಗತ್ಯವಿದೆ. ಇಂತಹ ಅಭಿವೃದ್ಧಿಯನ್ನು ಕಾಪಾಡಿಕೊಳ್ಳಲು ಭಾರತದ ಕಡೆಯವರು ಚೀನಾ ಜೊತೆಗೆ ಕೆಲಸ ಮಾಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಗಾವೊ ಫೆಂಗ್ ತಿಳಿಸಿದರು.