ನವದೆಹಲಿ: ಎಲ್ಲಾ ವೈದ್ಯಕೀಯ ಸಾಧನಗಳು ಗುಣಮಟ್ಟ ಮತ್ತು ಪರಿಣಾಮಕಾರಿ ಮಾನದಂಡಗಳು ಹೊಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯವು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಗೆ ಕೆಲ ತಿದ್ದುಪಡಿ ತಂದಿದೆ.
ಮಾನವರ ಅಥವಾ ಪ್ರಾಣಿಗಳ ಮೇಲೆ ಬಳಸುವ ವೈದ್ಯಕೀಯ ಉಪಕರಣಗಳನ್ನು 'ಔಷಧ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪರಿಗಣಿಸಿದ್ದು, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ತಿದ್ದುಪಡಿ ತಂದಿದೆ. ಪರಿಷ್ಕೃತ ತಿದ್ದುಪಡಿ ಕಾಯ್ದೆಯು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
2020ರಲ್ಲಿ ವೈದ್ಯಕೀಯ ಸಾಧನಗಳ ತಿದ್ದುಪಡಿ ನಿಯಮಗಳನ್ನು ಬಿಡುಗಡೆ ಮಾಡಿ ವೈದ್ಯಕೀಯ ಸಾಧನಗಳ ನೋಂದಣಿಯು ಕಡ್ಡಾಯವೆಂದು ಗೆಜೆಟ್ ಸೂಚನೆಯಲ್ಲಿದೆ. ಎಲ್ಲಾ ವೈದ್ಯಕೀಯ ಸಾಧನಗಳನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ. ಈ ಉಪಕರಣಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುಲು ನೆರವಾಗಲಿದೆ. ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯ ಜವಾಬ್ದಾರಿಯನ್ನು ಉಪಕರಣಗಳನ್ನು ಪೂರೈಸುವ ಕಂಪನಿಗಳ ಹೆಗಲಿಗೆ ಹಾಕಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತೆರಿಗೆ ವಿವಾದ ಇತ್ಯರ್ಥಪಡಿಸುವ 'ವಿವಾದ್ ಸೆ ವಿಶ್ವಾಸ್' ಮಸೂದೆ ಬದಲಾವಣೆಗೆ ಕೇಂದ್ರದ ಸಿದ್ಧತೆ
ಕೇಂದ್ರ ಸರ್ಕಾರವು ಔಷಧಿ ತಾಂತ್ರಿಕ ಸಲಹಾ ಮಂಡಳಿಯೊಂದಿಗೆ ಸಮಾಲೋಚಿಸಿದ ಬಳಿಕ 2020ರ ಏಪ್ರಿಲ್ 1 ರಿಂದ ಜಾರಿಗೆ ತರಲಿದೆ. ಒಮ್ಮೆ ಈ ಬಗ್ಗೆ ಅಧಿಸೂಚನೆ ಹೊರಬಿದ್ದರೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದ 'ದಿ ಸೆಂಟ್ರಲ್ ಡ್ರಗ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್(ಸಿಡಿಎಸ್ಸಿಒ) ಉತ್ಪಾದನೆ, ಆಮದು ಮತ್ತು ಎಲ್ಲಾ ವೈದ್ಯಕೀಯ ಸಾಧನಗಳ ಮಾರಾಟವನ್ನು ಪ್ರಮಾಣೀಕರಿಸಲಿದೆ.
ಪ್ರಸ್ತುತ ಕೇವಲ 23 ವಿಭಾಗಗಳ ವೈದ್ಯಕೀಯ ಸಾಧನಗಳನ್ನು ಮಾತ್ರ ಈ ಕಾನೂನಿನಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಉಪಕರಣಗಳ ನೋಂದಣಿಗೆ ಗಡುವು ಸಹ ನೀಡಲಾಗುತ್ತದೆ. ಅಧಿಸೂಚನೆ ನೀಡಿದ ಬಳಿಕ ವೈದ್ಯಕೀಯ ಸಾಧನಗಳ ಗುಣಮಟ್ಟ ಮತ್ತು ಸುರಕ್ಷತೆಯ ಅಂಶಗಳಿಗೆ ಸಂಬಂಧಿಸಿದ ದೂರುಗಳ ತನಿಖೆಯನ್ನು ಸಿಡಿಎಸ್ಸಿಒ ನೋಡಲ್ ಪ್ರಾಧಿಕಾರ ವಹಿಸಿಕೊಳ್ಳುತ್ತದೆ. ನಿಯಮಗಳನ್ನು ಉಲ್ಲಂಘಿಸಿದ್ದ ಕಂಡುಬಂದಲ್ಲಿ ಸಂಸ್ಥೆಗಳ ನೋಂದಣಿ ಸ್ಥಗಿತಗೊಳಿಸಬಹುದು ಅಥವಾ ರದ್ದುಗೊಳಿಸಬಹುದು.