ನವದೆಹಲಿ: ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ಮೂಲಕ ಗುತ್ತಿಗೆಗೆ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಳೆದ ವರ್ಷ ನಡೆದ ಹರಾಜಿನಲ್ಲಿ ಅದಾನಿ ಗ್ರೂಪ್ ಅತ್ಯಧಿಕ ಬಿಡ್ ಸಲ್ಲಿಸಿ ಜೈಪುರ, ತಿರುವನಂತಪುರಂ ಮತ್ತು ಗುವಾಹಟಿಯಲ್ಲಿನ ವಿಮಾನ ನಿಲ್ದಾಣಗಳ ಗುತ್ತಿಗೆ ಪಡೆದಿತ್ತು. ಹಸ್ತಾಂತರಿಸಬೇಕಾದ ಒಟ್ಟು ಆರು ವಿಮಾನ ನಿಲ್ದಾಣಗಳ ಪೈಕಿ ಈಗಾಗಲೇ ಅಹ್ಮದಾಬಾದ್, ಲಖನೌ ಮತ್ತು ಮಂಗಳೂರು ಏರ್ಪೋರ್ಟ್ಗಳನ್ನು ನೀಡಲಾಗಿದೆ. ಈಗ ಮತ್ತೆ ಮೂರು ನಿಲ್ದಾಣಗಳ ಹಸ್ತಾಂತರಕ್ಕೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್ ನೀಡಿದೆ.
ವಿಮಾನ ನಿಲ್ದಾಣಗಳನ್ನು ಖಾಸಗಿ ಡೆವಲಪರ್‌ಗೆ ಹಸ್ತಾಂತರಿಸುವುದರಿಂದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ₹ 1,070 ಕೋಟಿ ಮುಂಗಡ ಮೊತ್ತ ಪಡೆಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದರು.
ಮುಂಗಡವಾಗಿ ಎಎಐಗೆ ಬರುವ 1,070 ಕೋಟಿ ರೂ.ಗಳನ್ನ ಸಣ್ಣ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ. ಇತರ ಉಪಯೋಗಗಳನ್ನು ಪ್ರಯಾಣಿಕರು ಪಡೆಯಬಹುದಾಗಿದೆ. ಇದು ವಿಮಾನ ನಿಲ್ದಾಣಗಳ ಪಾರ್ದರ್ಶಕತೆ ಸುಧಾರಿಸಲು ಸಹ ನೆರವಾಗುತ್ತದೆ. ಈ ಒಪ್ಪಂದ ಐವತ್ತು ವರ್ಷಗಳಿಗೆ ಮಾತ್ರ ಸೀಮಿತವಾಗಿದ್ದು, ಆ ಬಳಿಕ ಎಎಐ ವಾಪಸ್ ಪಡೆಯಲಿದೆ ಎಂದರು.