ನವದೆಹಲಿ: ತೆರಿಗೆ ಸಂಪನ್ಮೂಲ ಅಂದಾಜಿಸಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವರಮಾನ ಹಂಚಿಕೆಯ ಶಿಫಾರಸು ಮಾಡುವ 15ನೇ ಹಣಕಾಸು ಆಯೋಗದ ವರದಿ ಸಲ್ಲಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಚಿವ ಸಂಪುಟವು ಮುಂದೂಡಲು ಅಂಗೀಕರಿಸಿದೆ.
ಮಾಜಿ ರಾಜ್ಯಸಭಾ ಸದಸ್ಯ ಎನ್ ಕೆ ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗವು ತನ್ನ ವರದಿಯನ್ನು ನವೆಂಬರ್ 30ರೊಳಗೆ ಸಲ್ಲಿಸಲಿದೆ ಎಂದು ಹೇಳಲಾಗಿತ್ತು. ಈ ಮಧ್ಯೆ ಸಿಂಗ್ ಅವರು, 'ಜಿಎಸ್ಟಿ ಸಂರಚನೆಯಲ್ಲಿ ಪ್ರಮುಖ ಬದಲಾವಣೆ ತರುವ ಅಗತ್ಯವಿದೆ. ಆದಾಯ ಸಂಗ್ರಹ ಸುಧಾರಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು. ಈಗಿನ ಕಾರ್ಯವಿಧಾನಗಳನ್ನು ಕಡಿಮೆ ಮಾಡಬೇಕು' ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ವರದಿ ಸಲ್ಲಿಕೆ ಅವಧಿಯನ್ನು ಮುಂದಕ್ಕೆ ಹಾಕಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 15ನೇ ಹಣಕಾಸು ಆಯೋಗದ ಮೊದಲ ಹಣಕಾಸು ವರ್ಷದ ಮೊದಲ ವರದಿಯನ್ನು ಸಲ್ಲಿಸಲು ಅನುಮೋದನೆ ನೀಡಿತು. ನಂತರ 2020-21 ಮತ್ತು 2021-22ರ ಹಣಕಾಸು ವರ್ಷದ ಅಂತಿಮ ವರದಿಯನ್ನು 2020ರ ಅಕ್ಟೋಬರ್ 30ರೊಳಗೆ ಸಲ್ಲಿಸುವಂತೆ ಅಧಿಕಾರವಧಿ ವಿಸ್ತರಿಸಿದೆ.
2020-2026ರ ಅವಧಿಯ ಸುಧಾರಣೆ ಮತ್ತು ನೂತನ ನೈಜಾಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಹಣಕಾಸಿನ ವಿವಿಧ ಅಂದಾಜುಗಳನ್ನು ಪರಿಶೀಲಿಸಲು ಆಯೋಗಕ್ಕೆ ಅನುವು ಮಾಡಿಕೊಡಲಿದೆ ಎಂದು ಅದು ಸ್ಪಷ್ಟನೆ ನೀಡಿದೆ.
14ನೇ ಹಣಕಾಸು ಆಯೋಗದ ಅವಧಿಯು ಮುಂದಿನ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಸಂವಿಧಾನದ ಕಲಂ 280ರ ಅನ್ವಯ, ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತದೆ. ಈ ಆಯೋಗವು ತೆರಿಗೆ ವರಮಾನವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡುವ ಸೂತ್ರ ಸೇರಿದಂತೆ ಕೇಂದ್ರದ ಯೋಜನೆಗಳ ಸಾಧಕ-ಬಾಧಕಗಳನ್ನು ವಿಮರ್ಶೆ ಮಾಡುತ್ತದೆ.