ನವದೆಹಲಿ: ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020,ರ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು 'ಒನ್ ಇಂಡಿಯಾ, ಒನ್ ಅಗ್ರಿಕಲ್ಚರ್ ಮಾರ್ಕೆಟ್' ರಚಿಸಲು ದಾರಿ ಮಾಡಿಕೊಡುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
‘ಒಂದು ದೇಶ ಒಂದು ಮಾರುಕಟ್ಟೆ’ ನೀತಿಯಡಿ ರೈತರು ಇನ್ನೂ ಮುಂದೆ ತಮ್ಮ ಉತ್ಪನ್ನಗಳನ್ನು ದೇಶದ ಯಾವ ಭಾಗದಲ್ಲಿ ಬೇಕಾದರೂ ಮಾರಾಟ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ಸುಗ್ರೀವಾಜ್ಞೆಯು ಮುಕ್ತ ವಾತಾವರಣ ಸೃಷ್ಟಿಸುತ್ತದೆ. ರೈತರು ಮತ್ತು ವ್ಯಾಪಾರಿಗಳು ಮಾರಾಟದ ಆಯ್ಕೆ ಮತ್ತು ಕೃಷಿ ಖರೀದಿಯ ಸ್ವಾತಂತ್ರ್ಯವನ್ನು ಪಡೆಯುತ್ತಾರೆ ಸಚಿವ ಸಂಪುಟದ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.
ಇದು ರಾಜ್ಯ ಕೃಷಿ ಉತ್ಪಾದನಾ ಮಾರುಕಟ್ಟೆ ಶಾಸನಗಳ ಅಡಿಯಲ್ಲಿ ಸೂಚಿಸಲ್ಪಟ್ಟ ಮಾರುಕಟ್ಟೆಗಳ ಭೌತಿಕ ಆವರಣದ ಹೊರಗೆ, ಮುಕ್ತವಾದ ಅಂತರ್ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ವಹಿವಾಟು ಉತ್ತೇಜಿಸುತ್ತದೆ. ದೇಶದಲ್ಲಿನ ವ್ಯಾಪಕವಾದ ನಿಯಂತ್ರಿತ ಕೃಷಿ ಮಾರುಕಟ್ಟೆಗಳನ್ನು ಮುಕ್ತವಾಗಿಸುವ ಐತಿಹಾಸಿಕ ಹೆಜ್ಜೆಯಾಗಿದೆ ಎಂದರು.
ಅಧಿಸೂಚಿತ ಎಪಿಎಂಸಿ ಮಾರುಕಟ್ಟೆ ಅಂಗಳದ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ನಿರ್ಬಂಧಗಳಿವೆ. ರೈತರು ರಾಜ್ಯ ಸರ್ಕಾರಗಳ ನೋಂದಾಯಿತ ಪರವಾನಗಿದಾರರಿಗೆ ಮಾತ್ರ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಬಂಧಿಸಲಾಗಿದೆ. ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ವಿವಿಧ ಎಪಿಎಂಸಿ ಶಾಸನಗಳು ವಿವಿಧ ರಾಜ್ಯಗಳ ನಡುವೆ ಕೃಷಿ ಉತ್ಪನ್ನಗಳ ಮುಕ್ತ ಹರಿವಿನಲ್ಲಿ ಅಡೆತಡೆಗಳಿವೆ.
ಹೆಚ್ಚುವರಿ ಸ್ಪರ್ಧೆಯಿಂದಾಗಿ ರೈತರಿಗೆ ಸಂಭಾವನೆ ದರ ಪಡೆಯಲು ನೆರವಾಗಲು ಹಾಗೂ ಎಪಿಎಂಸಿ ಮಾರುಕಟ್ಟೆ ಹೊರಗೆ ಹೆಚ್ಚುವರಿ ವ್ಯಾಪಾರದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ಸುಗ್ರೀವಾಜ್ಞೆ ತರಲಾಗಿದೆ. ಇದು ಒಂದು ಭಾರತ, ಒಂದು ಕೃಷಿ ಮಾರುಕಟ್ಟೆ ರಚಿಸಲು ದಾರಿ ಮಾಡಿಕೊಡುತ್ತದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.