ನವದೆಹಲಿ: ದೇಶದ ಆರ್ಥಿಕತೆಯ ಚಿತ್ರಣವನ್ನು ಜನಸಾಮಾನ್ಯರ ಮುಂದೆ ತೆರೆದಿಡುವ ಮುಂಗಡ ಪತ್ರ ಕಾಲಕಾಲಕ್ಕೆ ಹಲವು ರೂಪಾಂತರಗಳನ್ನು ಹೊಂದುತ್ತಾ ಬಂದಿದೆ. ಈ ಹಿಂದೆ ಬಜೆಟ್ ಸಂಜೆಯ ವೇಳೆಯಲ್ಲಿ ಮಂಡನೆ ಆಗುತ್ತಿತ್ತು ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ.
ಈ ಹಿಂದೆ ಸಂಜೆ 5 ಗಂಟೆಗೆ ಕೇಂದ್ರ ಬಜೆಟ್ ಮಂಡಿಸುವುದು ಒಂದು ಸಂಪ್ರದಾಯವಾಗಿತ್ತು. 2001ರಲ್ಲಿ ಅಂದಿನ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಅವರು ಈ ಸಮಯವನ್ನು ಮಾರ್ಪಡಿಸಿದರು. 2000ರವರೆಗೆ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಯಶವಂತ್ ಸಿನ್ಹಾ, ಬಜೆಟ್ ಮಂಡನೆ ಸಮಯವನ್ನು ಪೂರ್ವಾಹ್ನ 11 ಗಂಟೆಗೆ ನಿಗದಿಪಡಿಸಿ ಅಂದಿನಿಂದ ಇದೇ ಸಮಯದಲ್ಲಿ ಮಂಡನೆಯಾಗುತ್ತಿದೆ.
ಬಜೆಟ್ ಸಮಯದ ಬದಲಾವಣೆಯನ್ನು ಐತಿಹಾಸಿಕ ಆಧಾರದ ಮೇಲೆ ಮಾಡಲಾಯಿತು. ಸ್ವಾತಂತ್ರ್ಯಕ್ಕೆ 20 ವರ್ಷಗಳ ಮೊದಲು ಅಂದರೆ 1927ರಲ್ಲಿ ಆಗ, ಲಂಡನ್‌ನ ಬ್ರಿಟಿಷ್ ಅಧಿಕಾರಿಗಳಾದ 'ಹೌಸ್ ಆಫ್ ಲಾರ್ಡ್ಸ್' ಮತ್ತು 'ಹೌಸ್ ಆಫ್ ಕಾಮನ್ಸ್' ಸಹ ಬಜೆಟ್ ಮಂಡನೆಯಲ್ಲಿ ಭಾಗವಹಿಸುತ್ತಿದ್ದವು. ಭಾರತದಲ್ಲಿ ಸಂಜೆ 5 ಗಂಟೆಯಾಗಿದ್ದಾಗ ಲಂಡನ್‌ನಲ್ಲಿ ಬೆಳಿಗ್ಗೆ 11: 30 ಆಗಿರುತ್ತಿತ್ತು. ಅದಕ್ಕಾಗಿಯೇ ಭಾರತದಲ್ಲಿ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು.