ನವದೆಹಲಿ : ಮಹತ್ವಾಕಾಂಕ್ಷೆಯ ಭಾರತದ ಮೊದಲ ವಿಷಯದಲ್ಲಿ, ಸೀತಾರಾಮನ್ ಕೌಶಲ್ಯ, ಶಿಕ್ಷಣ ಮತ್ತು ಕೃಷಿಯತ್ತ ಗಮನ ಹರಿಸಿದ್ದಾರೆ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ. ಬಂಜರು ಭೂಮಿಯನ್ನು ಹೊಂದಿರುವ ರೈತರು ಸೌರಶಕ್ತಿ ಘಟಕಗಳನ್ನು ಸ್ಥಾಪಿಸಬಹುದು. ಇದರಿಂದ ಅವರು ಜೀವನ ಸಾಗಿಸಬಹುದು ಎಂದು ಹೇಳಿದ ಸೀತಾರಾಮನ್, ಈ ಉದ್ದೇಶಕ್ಕಾಗಿ 16 ಅಂಶಗಳ ಕ್ರಿಯಾ ಯೋಜನೆಯನ್ನು ಮಂಡಿಸಿದರು.
ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಿಗಾಗಿ ಕೃಷಿ ಉಡಾನ್ ಯೋಜನೆಯನ್ನು ಸರ್ಕಾರ ಪ್ರಾರಂಭಿಸುತ್ತದೆ. ನಮ್ಮ ಸರ್ಕಾರ ನೀರಾವರಿಗಾಗಿ ದೇಶದ 100 ಜಿಲ್ಲೆಗಳ ಆಯ್ಕೆ ಮಾಡಿ ಸಮಗ್ರ ನೀರಾವರಿ ಕಲ್ಪಿಸಲು ಯೋಜನೆ ರೂಪಿಸುತ್ತದೆ. ರೈತರಿಗಾಗಿ ಧಾನ್ಯ ಲಕ್ಷ್ಮೀ ಯೋಜನೆ ಆರಂಭ, 15 ಲಕ್ಷ ರೈತರಿಗೆ ಸೋಲಾರ್ ಪಂಪ್ಸೆಟ್, ಪಿಎಂ ಕುಸುಮ್ ಯೋಜನೆ ಜಾರಿ ಸೇರಿದಂತೆ ಸೋಲಾರ್ ವ್ಯವಸ್ಥೆಯ ಆಧುನೀಕರಣದ ಮೂಲಕ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ರಾಸಾಯನಿಕ ಗೊಬ್ಬರ ಸಮಸ್ಯೆ ಬಗೆಹರಿಸಲು, ಎಲ್ಲರಿಗೂ ಸೂಕ್ತ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ. ಮುದ್ರಾ, ನಬಾರ್ಡ್ ಸಹಯೋಗದಲ್ಲಿ ಕೃಷಿ ವೇರ್ಹೌಸ್ ನಿರ್ಮಾಣ, ಶೂನ್ಯ ಬಂಡವಾಳದಲ್ಲಿ ಕೃಷಿ ಯೋಜನೆ ಸೇರಿದಂತೆ ಖಾಸಗಿ ಸಹಭಾಗಿತ್ವದಲ್ಲಿ ಕಿಸಾನ್ ರೈಲು ಓಡಿಸುವುದಾಗಿ ಘೋಷಣೆ ಮಾಡಿದರು.
ಕೃಷಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಎಲ್ಲ ರೈತರಿಗೂ ಸಿಗುವಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ನೈಸರ್ಗಿಕ ಕೃಷಿಗೆ ರಾಷ್ಟ್ರೀಯ ಮಾರುಕಟ್ಟೆ ಮತ್ತು ಮೀನುಗಾರರಿಗೆ ಸಾಗರಮಿತ್ರ ಯೋಜನೆಯನ್ನು ಬಜೆಟ್ನಲ್ಲಿ ನಿರ್ಮಲಾ ಘೋಷಿಸಿದರು.